ಶಿಡ್ಲಘಟ್ಟ: ತಾಲೂಕಿನ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯ ಪ್ರಗತಿಯಲ್ಲಿದ್ದು, ನಗರ ಪ್ರದೇಶದಲ್ಲಿ ಶೇ.50 ಹಾಗೂ ಗ್ರಾಮಾಂತರ ಭಾಗದಲ್ಲಿ ಶೇ.61ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಹಶೀಲ್ದಾರ್ ಎನ್.ಗಗನ ಸಿಂಧು ತಿಳಿಸಿದ್ದಾರೆ.
ತಾಲೂಕು ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿಯನ್ನು ಮತ್ತಷ್ಟು ನಿಖರ ಹಾಗೂ ನವೀಕರಿಸುವ ಉದ್ದೇಶದಿಂದ ಎಸ್‌ಐಆರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಪ್ರತಿಯೊಬ್ಬ ಅರ್ಹ ಮತದಾರರು ಎನ್ಯೂಮರೇಷನ್ ಫಾರಂ ಅನ್ನು ಕಡ್ಡಾಯವಾಗಿ ಭರ್ತಿ ಮಾಡಿ, ನಿಗದಿತ ಸಮಯದೊಳಗೆ ಬೂತ್ ಮಟ್ಟದ ಅಧಿಕಾರಿಗಳಿಗೆ (BLO) ಸಲ್ಲಿಸುವಂತೆ ಮನವಿ ಮಾಡಿದರು.
ಬಳಿಕ ಜಂಟಿ ಕೃಷಿ ನಿರ್ದೇಶಕರು ಹಾಗೂ ಮತದಾರರ ನೋಂದಣಾಧಿಕಾರಿ ಎಸ್.ಎಸ್.ಅಬೀದ್ ಮಾತನಾಡಿ, ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಫಾರಂ ವಿತರಣೆ ಹಾಗೂ ಸಂಗ್ರಹ ಕಾರ್ಯ ನಡೆಸುತ್ತಿದ್ದಾರೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ, ಸರಿಯಾದ ಮಾಹಿತಿ ನೀಡಿ ಚುನಾವಣಾ ಅಧಿಕಾರಿಗಳೊಂದಿಗೆ ಸಹಕರಿಸಬೇಕು ಎಂದು ತಿಳಿಸಿದರು.
2002ಕ್ಕೂ ಮೊದಲು ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವವರು ಅಗತ್ಯ ದಾಖಲೆಗಳು ತಕ್ಷಣ ಲಭ್ಯವಿಲ್ಲದಿದ್ದರೂ ಮೊದಲು ಎನ್ಯೂಮರೇಷನ್ ಫಾರಂಗೆ ಸಹಿ ಮಾಡಿ ಬಿಎಲ್‌ಒಗಳಿಗೆ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಫಾರಂ ಸಲ್ಲಿಕೆಯನ್ನು ನಿರ್ಲಕ್ಷಿಸಬಾರದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ.



