Wednesday, July 15, 2026
Google search engine

Homeಆರೋಗ್ಯಅಪರೂಪದ ಕ್ಯಾನ್ಸರ್‌ಗೆ ಸೆಡ್ಡು ಹೊಡೆದ ವೈದ್ಯರು : ಬೆಂಗಳೂರಿನ 28 ದಿನದ ಹಸುಗೂಸಿಗೆ ಮರುಜನ್ಮ

ಅಪರೂಪದ ಕ್ಯಾನ್ಸರ್‌ಗೆ ಸೆಡ್ಡು ಹೊಡೆದ ವೈದ್ಯರು : ಬೆಂಗಳೂರಿನ 28 ದಿನದ ಹಸುಗೂಸಿಗೆ ಮರುಜನ್ಮ

ಬೆಂಗಳೂರು : ಅಪರೂಪದ ಹಾಗೂ ಅತ್ಯಂತ ಅಪಾಯಕಾರಿಯಾದ ‘ಇನ್‌ಫೆಂಟೈಲ್ ಫೈಬ್ರೊಸಾರ್ಕೋಮಾ’ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 28 ದಿನದ ಹಸುಗೂಸಿಗೆ ಬೆಂಗಳೂರಿನ ಎಚ್‌ಸಿಜಿ ಕ್ಯಾನ್ಸರ್ ಸೆಂಟರ್ ಯಶಸ್ವಿ ಶಸ್ತ್ರಚಿಕಿತ್ಸೆ ನೆರವೇರಿಸಿ ಮರುಜೀವ ನೀಡಿದೆ.

ಇತರೆ ಆಸ್ಪತ್ರೆಗಳಲ್ಲಿ ಮಗುವಿನ ಕೈ ಕತ್ತರಿಸುವುದೇ ಏಕೈಕ ಮಾರ್ಗ ಎಂದು ತಿಳಿಸಲಾಗಿದ್ದರೂ, ಎಚ್‌ಸಿಜಿ ಆಸ್ಪತ್ರೆಯ ತಜ್ಞ ವೈದ್ಯರ ತಂಡವು ಸುಧಾರಿತ ತಂತ್ರಜ್ಞಾನ ಬಳಸಿ ಮಗುವಿನ ಜೀವದ ಜೊತೆಗೆ ಕೈಯನ್ನೂ ಉಳಿಸುವಲ್ಲಿ ಯಶಸ್ವಿಯಾಗಿದೆ. ಮಗುವಿನ ಬಲ ಮುಂಗೈಯಲ್ಲಿ ಕಾಣಿಸಿಕೊಂಡಿದ್ದ ಸಣ್ಣ ಊತ ಕೆಲವೇ ದಿನಗಳಲ್ಲಿ 11.3 × 9.8 ಸೆಂ.ಮೀ ಗಾತ್ರದ ಬೃಹತ್ ಟ್ಯೂಮರ್ ಆಗಿ ಬೆಳೆದಿತ್ತು. ಆಸ್ಪತ್ರೆಗೆ ದಾಖಲಾದಾಗ ಮಗು ತೀವ್ರ ರಕ್ತಹೀನತೆಯಿಂದ ಬಳಲುತ್ತಿದ್ದು, ಟ್ಯೂಮರ್ ಪ್ರಮುಖ ನರಗಳು ಹಾಗೂ ರಕ್ತನಾಳಗಳನ್ನು ಆವರಿಸಿಕೊಂಡಿದ್ದರಿಂದ ಶಸ್ತ್ರಚಿಕಿತ್ಸೆ ಅತ್ಯಂತ ಸವಾಲಿನದ್ದಾಗಿತ್ತು.

ಜೀನೋಮಿಕ್ ಪರೀಕ್ಷೆಯಲ್ಲಿ ಲಕ್ಷದಲ್ಲಿ ಕೇವಲ 0.3 ಜನರಲ್ಲಿ ಕಾಣಿಸಿಕೊಳ್ಳುವ ‘NTRK ಜೀನ್ ಫ್ಯೂಷನ್’ ಬದಲಾವಣೆ ಪತ್ತೆಯಾಗಿದ್ದು, ಇದೇ ಕ್ಯಾನ್ಸರ್ ವೇಗವಾಗಿ ಬೆಳೆಯಲು ಕಾರಣವಾಗಿತ್ತು. ಆರ್ಥೋಪೆಡಿಕ್ ಆಂಕೊಲಾಜಿ, ಅರಿವಳಿಕೆ, ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ವಿವಿಧ ವಿಭಾಗಗಳ 14ರಿಂದ 16 ತಜ್ಞ ವೈದ್ಯರ ತಂಡವು ಹಂತ ಹಂತವಾಗಿ ಚಿಕಿತ್ಸಾ ಯೋಜನೆ ರೂಪಿಸಿತು.

ಮೊದಲಿಗೆ ಸೂಪರ್-ಸೆಲೆಕ್ಟಿವ್ ಎಂಬೋಲೈಸೇಶನ್ ಮೂಲಕ ಟ್ಯೂಮರ್‌ಗೆ ರಕ್ತ ಪೂರೈಕೆಯನ್ನು ನಿಯಂತ್ರಿಸಲಾಯಿತು. ಬಳಿಕ 7ರಿಂದ 8 ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಟ್ಯೂಮರ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಯಿತು. 3D-ಪ್ರಿಂಟೆಡ್ ಮಾದರಿ ಹಾಗೂ ಡಿಜಿಟಲ್ ತಂತ್ರಜ್ಞಾನದ ನೆರವಿನಿಂದ ಮಗುವಿನ ನರಗಳು ಮತ್ತು ಕೀಲುಗಳಿಗೆ ಹಾನಿಯಾಗದಂತೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ನಂತರ ಪ್ಲಾಸ್ಟಿಕ್ ಸರ್ಜರಿ ತಂಡವು ಮಗುವಿನ ತೊಡೆಯ ಭಾಗದಿಂದ ಫ್ಲ್ಯಾಪ್ ತೆಗೆದು ಮುಂಗೈಗೆ ಕಸಿ ಮಾಡುವ ಮೂಲಕ ಕೈಯ ಕಾರ್ಯಕ್ಷಮತೆಯನ್ನು ಪುನಃಸ್ಥಾಪಿಸಿತು.

ಈ ಅತ್ಯಾಧುನಿಕ ಚಿಕಿತ್ಸೆಗೆ ಸುಮಾರು 30ರಿಂದ 35 ಲಕ್ಷ ರೂಪಾಯಿ ವೆಚ್ಚವಾಗಿದ್ದು, ದಾನಿಗಳು, ಎಚ್‌ಸಿಜಿ ಫೌಂಡೇಶನ್ ಹಾಗೂ ವಿವಿಧ ಸಂಸ್ಥೆಗಳ ನೆರವಿನಿಂದ ಆರ್ಥಿಕ ಸಮಸ್ಯೆ ನಿವಾರಿಸಲಾಯಿತು. ಶಸ್ತ್ರಚಿಕಿತ್ಸೆಯ ಬಳಿಕ ಕ್ಯಾನ್ಸರ್ ಮರುಕಳಿಸದಂತೆ ‘ಎಂಟ್ರೆಕ್ಟಿನಿಬ್’ ಔಷಧಿ ನೀಡಲಾಗಿದ್ದು, ಇದೀಗ ಒಂದೂವರೆ ವರ್ಷ ಕಳೆದರೂ ಮಗು ಸಂಪೂರ್ಣ ಆರೋಗ್ಯವಾಗಿದ್ದು, ಕೈಯ ಕಾರ್ಯಕ್ಷಮತೆಯೂ ಮರಳಿದೆ. ಇದು ವೈದ್ಯಕೀಯ ಕ್ಷೇತ್ರದ ಮಹತ್ವದ ಸಾಧನೆ ಎಂದು ವೈದ್ಯರು ಬಣ್ಣಿಸಿದ್ದು, ಅಪರೂಪದ ಕ್ಯಾನ್ಸರ್‌ಗಳಿಗೆ ಸರಿಯಾದ ಸಮಯದಲ್ಲಿ ಪರಿಣತ ಚಿಕಿತ್ಸೆ ದೊರೆತರೆ ಅಂಗ ಕಳೆದುಕೊಳ್ಳುವುದನ್ನು ತಪ್ಪಿಸಬಹುದು ಎಂದು ಹೇಳಿದ್ದಾರೆ.

ಮಗುವಿನ ಪೋಷಕರು, ಕೈ ಕತ್ತರಿಸಬೇಕೆಂದು ಹೇಳಿದಾಗ ತಾವು ಸಂಪೂರ್ಣ ನಿರಾಶರಾಗಿದ್ದೆವು. ಆದರೆ ಎಚ್‌ಸಿಜಿ ವೈದ್ಯರು ಹೊಸ ಭರವಸೆ ನೀಡಿದರು. ಇಂದು ಮಗಳು ಸಾಮಾನ್ಯ ಮಕ್ಕಳಂತೆ ಬೆಳೆಯುತ್ತಿರುವುದು ನಮಗೆ ದೊಡ್ಡ ಪವಾಡ ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular