ಬೆಂಗಳೂರು : ರಾಜ್ಯದಲ್ಲಿ ತುರ್ತು ವೈದ್ಯಕೀಯ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಕರ್ನಾಟಕ ಸರ್ಕಾರ 108 ಆ್ಯಂಬುಲೆನ್ಸ್ ಸೇವೆಯಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತರಲು ಮುಂದಾಗಿದೆ.
ಇನ್ನು ಮುಂದೆ ತುರ್ತು ಕರೆ ಬಂದ ಬಳಿಕ ನಿಗದಿತ ಸಮಯದೊಳಗೆ ಆ್ಯಂಬುಲೆನ್ಸ್ ಸ್ಥಳಕ್ಕೆ ತಲುಪದಿದ್ದರೆ, ಸಂಬಂಧಪಟ್ಟ ಚಾಲಕ ಅಥವಾ ಸೇವೆ ಒದಗಿಸುವ ಸಂಸ್ಥೆಗೆ ₹5,000 ದಂಡ ವಿಧಿಸಲಾಗುತ್ತದೆ. ಈ ಕುರಿತು ಆರೋಗ್ಯ ಸಚಿವ ಯು.ಟಿ.ಖಾದರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಜೀವ ರಕ್ಷಣೆಯಂತಹ ತುರ್ತು ಸೇವೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಅಥವಾ ವಿಳಂಬವನ್ನು ಸಹಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ನಿಯಮ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಅನ್ವಯವಾಗಲಿದೆ.
ಹೊಸ ಮಾರ್ಗಸೂಚಿಯ ಪ್ರಕಾರ, ತುರ್ತು ಕರೆ ಬಂದ ಬಳಿಕ 13ರಿಂದ 15 ನಿಮಿಷಗಳೊಳಗೆ 108 ಆ್ಯಂಬುಲೆನ್ಸ್ ರೋಗಿಯಿರುವ ಸ್ಥಳವನ್ನು ತಲುಪಬೇಕು. ಈ ಗಡುವು ಮೀರಿದರೆ ಸಂಬಂಧಪಟ್ಟ ಏಜೆನ್ಸಿಯನ್ನು ನೇರ ಹೊಣೆಗಾರರನ್ನಾಗಿ ಮಾಡಿ ₹5,000 ದಂಡ ವಿಧಿಸಲಾಗುತ್ತದೆ.
ಮೆಟ್ರೋ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆಯನ್ನು ನೆಪವಾಗಿ ಹೇಳಿ ವಿಳಂಬ ಮಾಡುವುದಕ್ಕೂ ಅವಕಾಶ ಇರುವುದಿಲ್ಲ. ನಿಗದಿತ ಅವಧಿಯಲ್ಲಿ ತುರ್ತು ಸೇವೆ ಒದಗಿಸುವುದು ಚಾಲಕರು ಹಾಗೂ ಗುತ್ತಿಗೆ ಸಂಸ್ಥೆಗಳ ಜವಾಬ್ದಾರಿಯಾಗಿರುತ್ತದೆ.
ಇನ್ನೂ ರಾಜ್ಯದಲ್ಲಿರುವ ತಾಂತ್ರಿಕ ದೋಷಗಳಿಂದ ಬಳಲುತ್ತಿರುವ ಹಾಗೂ ಪದೇ ಪದೇ ರಸ್ತೆಯಲ್ಲೇ ಕೆಟ್ಟು ನಿಲ್ಲುವ ಹಳೆಯ ಮಾದರಿಯ 108 ಆ್ಯಂಬುಲೆನ್ಸ್ಗಳನ್ನು ಸಂಪೂರ್ಣವಾಗಿ ಸೇವೆಯಿಂದ ಹಿಂಪಡೆದು ಸ್ಕ್ರ್ಯಾಪ್ ಮಾಡಲು ಸರ್ಕಾರ ಸೂಚಿಸಿದ್ದು, ಅವುಗಳ ಬದಲಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ ಹೊಸ ತಲೆಮಾರಿನ ಆ್ಯಂಬುಲೆನ್ಸ್ಗಳನ್ನು ಖರೀದಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.
ಪ್ರತಿಯೊಬ್ಬ ನಾಗರಿಕನಿಗೂ ಸಕಾಲದಲ್ಲಿ ತುರ್ತು ವೈದ್ಯಕೀಯ ನೆರವು ದೊರೆಯಬೇಕು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ನಿಯಮ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.



