ಬೆಂಗಳೂರು : ವೈಯಕ್ತಿಕ ಜೀವನದಲ್ಲಿ ಎದುರಾದ ಕಠಿಣ ಸಂದರ್ಭಗಳ ನಡುವೆಯೇ ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಟ್ರೋಲ್‌ಗಳು ಮತ್ತು ನೆಗೆಟಿವ್ ಕಮೆಂಟ್‌ಗಳ ಬಗ್ಗೆ ನಟಿ ಕೃಷಿ ತಾಪಂಡ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ತಮ್ಮ ಯೂಟ್ಯೂಬ್ ವ್ಲಾಗ್‌ನಲ್ಲಿ ಮನದ ನೋವನ್ನು ಹಂಚಿಕೊಂಡಿರುವ ಅವರು, ಜೀವನದಲ್ಲಿ ಒಂದರ ಮೇಲೊಂದು ಸಂಕಷ್ಟಗಳು ಎದುರಾಗುತ್ತಿದ್ದರೂ ಧೈರ್ಯದಿಂದ ಮುಂದೆ ಸಾಗಲೇಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ. ನನ್ನ ಜೀವನದಲ್ಲಿ ಏನು ನಡೆಯುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಏಟಿನ ಮೇಲೆ ಏಟು ಬೀಳುತ್ತಿದ್ದರೂ ಎದ್ದು ನಿಂತು ಮುಂದಕ್ಕೆ ನಡೆಯಲು ಪ್ರಯತ್ನಿಸುತ್ತಿದ್ದೇನೆ. ಬೇರೆ ಆಯ್ಕೆ ಇಲ್ಲ ಎಂದು ಕೃಷಿ ತಾಪಂಡ ಭಾವುಕರಾಗಿದ್ದಾರೆ.
ತಮ್ಮ ಪರಿಸ್ಥಿತಿಯನ್ನು ವಿವರಿಸಿದ ನಟಿ, ಯಾರಾದರೂ ಹೇಗಿದ್ದೀರಾ ಎಂದು ಕೇಳಿದಾಗ ನಾನು ಬ್ಲ್ಯಾಂಕ್ ಆಗುತ್ತೇನೆ. ಆ ಪ್ರಶ್ನೆಗೆ ನನ್ನ ಬಳಿ ಉತ್ತರವೇ ಇಲ್ಲ ಎಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.
ಟ್ರೋಲ್‌ಗಳಿಗೆ ಕೃಷಿ ತಾಪಂಡ ತಿರುಗೇಟು : ಸಾಮಾಜಿಕ ಜಾಲತಾಣಗಳಲ್ಲಿನ ನೆಗೆಟಿವ್ ಕಮೆಂಟ್‌ಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಒಳ್ಳೆಯ ಸಂಗತಿಗಳ ನಡುವೆ ಇರುವ ಕೆಟ್ಟದ್ದನ್ನು ತೆಗೆದುಹಾಕುವಂತೆ ನಕಾರಾತ್ಮಕ ಕಾಮೆಂಟ್‌ಗಳನ್ನು ಬ್ಲಾಕ್ ಮತ್ತು ರಿಮೂವ್ ಮಾಡುತ್ತೇನೆ ಎಂದಿದ್ದಾರೆ.
ಒಳ್ಳೆಯ ಟೊಮ್ಯಾಟೋಗಳ ಬುಟ್ಟಿಯಲ್ಲಿ ಒಂದು ಕೊಳೆತ ಟೊಮ್ಯಾಟೋ ಇದ್ದರೆ ಅದನ್ನು ಮೊದಲು ತೆಗೆದುಹಾಕುತ್ತೇವೆ. ಇಲ್ಲವಾದರೆ ಅದು ಇಡೀ ಬುಟ್ಟಿಯನ್ನು ಹಾಳು ಮಾಡುತ್ತದೆ. ನೆಗೆಟಿವ್ ಕಮೆಂಟ್ ಮಾಡುವವರಿಗೂ ಇದೇ ಅನ್ವಯ ಎಂದು ಹೇಳಿದ್ದಾರೆ.
ತಾವು ಹಂಚಿಕೊಂಡ ಜಾಹೀರಾತು ಮತ್ತು ಪ್ರಮೋಷನ್ ವಿಡಿಯೋಗಳಿಗೆ ಬಂದ ಟೀಕೆಗಳಿಗೆ ಪ್ರತಿಕ್ರಿಯಿಸಿದ ಕೃಷಿ ತಾಪಂಡ, ನಾನು ಇಷ್ಟಪಟ್ಟು ಕಟ್ಟಿದ ಮನೆಯಲ್ಲಿ ಈಗ ನಾನು ಇಲ್ಲ. ಆದರೆ ಅದರ ಬಾಡಿಗೆಯನ್ನು ಇನ್ನೂ ಕಟ್ಟುತ್ತಿದ್ದೇನೆ. ನನ್ನ ಬಿಲ್‌ಗಳು, ಇಎಂಐಗಳನ್ನು ನಾನೇ ಪಾವತಿಸಬೇಕು ಎಂದು ಹೇಳಿದ್ದಾರೆ.
ಕೆಲಸದ ವಿಡಿಯೋ ಹಾಕಿದ್ದಕ್ಕೆ ನಾಚಿಕೆ ಆಗಲ್ವಾ ಎಂದು ಕೇಳುವವರು, ನನ್ನ ಬಾಡಿಗೆ ಅಥವಾ ಮೆಡಿಕಲ್ ಬಿಲ್‌ಗಳನ್ನು ಕಟ್ಟುತ್ತಾರಾ? ಎಂದು ಪ್ರಶ್ನಿಸಿದ್ದಾರೆ.
ನನ್ನ ನೋವು ನಿಮಗೆ ಒಂದು ಘಟನೆ, ನನಗೆ ಅದು ದೊಡ್ಡ ನಷ್ಟ : ತಮ್ಮ ಮೌನವನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ನಟಿ, “ನಾನು ಸೈಲೆಂಟ್ ಆಗಿದ್ದೇನೆ ಎಂದು ಪದೇಪದೇ ನೋವು ಕೊಡಬೇಡಿ. ನಿಮಗೆ ಅದು ಒಂದು ಘಟನೆ ಇರಬಹುದು, ಆದರೆ ನನಗೆ ಅದು ತುಂಬಲಾರದ ನಷ್ಟ ಎಂದಿದ್ದಾರೆ.
ಕಷ್ಟ ತಾಳಲಾರದೆ ಕುಸಿದರೆ ಹೇಡಿ ಎನ್ನುತ್ತಾರೆ, ಬದುಕಲು ಪ್ರಯತ್ನಿಸಿದರೆ ಟ್ರೋಲ್ ಮಾಡುತ್ತಾರೆ. ನಕ್ಕರೆ ಬೇಗ ಮರೆತಿದ್ದೀರಾ ಎನ್ನುತ್ತಾರೆ. ನನ್ನ ಹೃದಯ ಒಡೆದಿದ್ದರೂ ಕ್ಯಾಮೆರಾ ಮುಂದೆ ಬಂದಿದ್ದೇನೆ ಎಂದು ಕೃಷಿ ತಾಪಂಡ ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.



