ಬೆಂಗಳೂರು : ನಮ್ಮ ಸರ್ಕಾರ ದಾರಿ ತಪ್ಪಿಲ್ಲ ಮತ್ತು ನಾನು ಅಸಹಾಯಕ ಮುಖ್ಯಮಂತ್ರಿಯೂ ಅಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ಜನರಿಗೆ ನೀಡಿದ ಎಲ್ಲಾ ಭರವಸೆಗಳನ್ನು ನಾವು ಈಡೇರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷಗಳಿಗೆ ಖಡಕ್ ಉತ್ತರ ನೀಡಿದರು. ಇದರ ಜೊತೆಗೆ ರಾಜ್ಯದಲ್ಲಿರುವ ಅಕ್ರಮ ಬಾಂಗ್ಲಾದೇಶದವರಿಗೆ ಮನೆ ಕೊಡುವುದಿಲ್ಲ ಮತ್ತು ಅವರನ್ನು ರಾಜ್ಯದಿಂದ ಹೊರ ಕಳುಹಿಸಲಾಗುವುದು ಎಂದು ಹೇಳಿದರು.
ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಗೆ ಉತ್ತರಿಸಿದ ಅವರು, ತಮ್ಮ ಸರ್ಕಾರದ ಸಾಧನೆಗಳನ್ನು ಅಂಕಿಅಂಶಗಳ ಸಮೇತ ಬಿಚ್ಚಿಟ್ಟರು.
ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾದೇಶದ ವಲಸಿಗರ ವಿಚಾರವಾಗಿ ಮಾತನಾಡಿದ ಸಿಎಂ, ಅಕ್ರಮ ವಲಸಿಗರಿಗೆ ಯಾವುದೇ ಕಾರಣಕ್ಕೂ ಸರ್ಕಾರಿ ಮನೆಗಳನ್ನು ನೀಡುವುದಿಲ್ಲ. ಅವರನ್ನು ಗುರುತಿಸಿ ರಾಜ್ಯದಿಂದ ಹೊರಹಾಕುವ ಪ್ರಕ್ರಿಯೆಯನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ತಮ್ಮ ಸರ್ಕಾರ ಮತ್ತು ಹಿಂದಿನ ಬಿಜೆಪಿ ಸರ್ಕಾರದ ನಡುವಿನ ಅಭಿವೃದ್ಧಿ ಕೆಲಸಗಳ ವ್ಯತ್ಯಾಸವನ್ನು ಮುಖ್ಯಮಂತ್ರಿಗಳು ವಿವರಿಸಿದರು
ಹಿಂದುಳಿದ ವರ್ಗದವರ ಬಗ್ಗೆ ಕಾಳಜಿಯಿರುವ ನಮ್ಮ ಕಾಂಗ್ರೆಸ್ ಸರ್ಕಾರದ ಅವಧಿ 2013-14 ರಿಂದ 2018 ರವರೆಗೆ 543 ಹಾಸ್ಟೆಲ್ ಗಳನ್ನು ನಿರ್ಮಿಸಲಾಗಿದೆ. ಆದರೆ ನಂತರದ ಬಿಜೆಪಿ ಸರ್ಕಾರದ ಅವಧಿಯಲ್ಲಿ(2019 ರಿಂದ 2023) ಕೇವಲ 5 ಹಾಸ್ಟೆಲ್‌ಗಳು ಆಗಿವೆ. ಕಾಂಗ್ರೆಸ್ ಸರ್ಕಾರ 2023-24 ರಿಂದ ಇಲ್ಲಿಯವರೆಗೆ 220 ಹಾಸ್ಟೆಲ್ ನಿರ್ಮಿಸಿದ್ದೇವೆ.
ನಮ್ಮ ಸರ್ಕಾರ 1452000 ಮನೆಗಳನ್ನು ನಿರ್ಮಿಸಿದ್ದೇವೆ, ಬಿಜೆಪಿ ಅವಧಿಯಲ್ಲಿ ಕೇವಲ 5 ಲಕ್ಷ ಮನೆಗಳಾಗಿವೆ. ಈ ಎಲ್ಲ ಸತ್ಯಾಂಶಗಳನ್ನು ರಾಜ್ಯಪಾಲರ ಭಾಷಣದಲ್ಲಿ ಸೇರಿಸಲಾಗಿತ್ತು. ನಾವು ಜನಪರವಾದ, ಸಮಾಜಮುಖಿಯಾದ ಆಡಳಿತವನ್ನು ನೀಡುತ್ತಿದ್ದು, ಕರ್ನಾಟಕದ ಅಭಿವೃದ್ಧಿ ಮಾದರಿ ಸರ್ಕಾರವಾಗಿದೆ. ಈ ಅಭಿವೃದ್ಧಿ ಮಾದರಿಯನ್ನು 21 ಕ್ಕಿಂತ ಹೆಚ್ಚು ಕೇಂದ್ರ ಸಚಿವರು ಮತ್ತು ವಿವಿಧ ರಾಜ್ಯದ ಮುಖ್ಯಮಂತ್ರಿಗಳು ಶ್ಲಾಘಿಸಿದ್ದಾರೆ. ಆದ್ದರಿಂದ ರಾಜ್ಯಪಾಲರು, ಸರ್ಕಾರದ ಭಾಷಣವನ್ನು ಓದಿದ್ದರೆ, ನಮ್ಮ ಜನಪರ ಆಡಳಿತದ ಬಗ್ಗೆ ಜನರಿಗೆ ಅರಿವು ನೀಡಿದಂತಾಗುತ್ತಿತ್ತು ಎಂದು ತಿಳಿಸಿದರು.
ಬಿಜೆಪಿ ಸರ್ಕಾರವನ್ನು ‘ಸಂವೇದನಾರಹಿತ’ ಎಂದು ಟೀಕಿಸಿದ ಸಿದ್ದರಾಮಯ್ಯ, ರೈತರು ಗೊಬ್ಬರ ಕೇಳಿದ್ದಕ್ಕೆ ಗೋಲಿಬಾರ್ ನಡೆಸಿದ ಇತಿಹಾಸ ಬಿಜೆಪಿಯದ್ದು. ಅನ್ನಭಾಗ್ಯದ ಅಕ್ಕಿ ಕಡಿತಗೊಳಿಸಿದ್ದು ಅವರ ಸಂವೇದನಾರಹಿತ ಆಡಳಿತಕ್ಕೆ ಸಾಕ್ಷಿ. ಆದರೆ ನಮ್ಮ ಸರ್ಕಾರ ಕಬ್ಬು ಬೆಳೆಗಾರರಿಗೆ ಎಫ್ ಆರ್‌ಪಿ ದರಕ್ಕಿಂತ ಹೆಚ್ಚಿನ ಬೆಲೆ ನೀಡಲು 300 ಕೋಟಿ ರೂ. ಹೆಚ್ಚುವರಿ ಹೊರೆ ಹೊತ್ತಿದೆ. ಮೆಕ್ಕೆಜೋಳ ಖರೀದಿಗೆ 40 ಲಕ್ಷ ಮೆಟ್ರಿಕ್ ಟನ್ ವ್ಯವಸ್ಥೆ ಮಾಡಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗಾಗಿ ತಂದ ಎಸ್ ಸಿಪಿ, ಟಿಎಸ್ ಪಿ ಯೋಜನೆಯನ್ನು ಕೇಂದ್ರ ಸರ್ಕಾರವೂ ಜಾರಿಗೆ ತರಬೇಕು ಎಂದು ಒತ್ತಾಯಿಸಿದ ಸಿಎಂ, ಈ ಯೋಜನೆಯಡಿ ತಮ್ಮ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ 1.17 ಲಕ್ಷ ಕೋಟಿಗೂ ಹೆಚ್ಚು ಹಣ ನೀಡಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಬೆಲೆ ಏರಿಕೆ ಮಾಡಲಾಗಿದೆ ಎಂಬ ಟೀಕೆಗೆ ಉತ್ತರಿಸಿದ ಅವರು, ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ತೆರಿಗೆ ಮತ್ತು ಬೆಲೆ ಏರಿಕೆ ಪ್ರಮಾಣ ಗಣನೀಯವಾಗಿ ಕಡಿಮೆಯಿದೆ. ನಾವು ಸತ್ಯಕ್ಕೆ ಹತ್ತಿರವಾದ ಬಜೆಟ್ ಮಂಡಿಸಿದ್ದೇವೆ ಎಂದು ಸಮರ್ಥಿಸಿಕೊಂಡರು.



