ನವದೆಹಲಿ: ʻದೇಶದ ನಿಯಮಗಳನ್ನ ಪಾಲಿಸಲು ಸಾಧ್ಯವಾಗದಿದ್ರೆ, ದೇಶ ಬಿಟ್ಟು ತೊಲಗಿ ಎಂದು ವಾಟ್ಸಪ್ ಒಡೆತನದ ಮೆಟಾ ಸಂಸ್ಥೆಗೆ ಸುಪ್ರೀಂ ಕೋರ್ಟ್ ಖಡಕ್ ಎಚ್ಚರಿಕೆ ನೀಡಿದೆ. ಗೌಪ್ಯತೆ ಉಲ್ಲಂಘನೆ ಆರೋಪ ಕೇಳಿಬಂದ ಹಿನ್ನೆಲೆ ಸುಪ್ರೀಂ ಕೋರ್ಟ್, ವಾಟ್ಸಪ್ ಒಡೆತನದ ಮೆಟಾ ಸಂಸ್ಥೆಗೆ ಕಠಿಣ ಎಚ್ಚರಿಕೆ ನೀಡಿದೆ. “ದೇಶದ ಕಾನೂನುಗಳನ್ನು ಗೌರವಿಸಲು ಸಾಧ್ಯವಾಗದಿದ್ದರೆ ಭಾರತ ಬಿಟ್ಟು ತೊಲಗಿ” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠವು ಗುಡುಗಿದೆ.
ವಾಟ್ಸಪ್‌ನ 2021ರ ವಿವಾದಿತ ಗೌಪ್ಯತೆ ನೀತಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯವು, ನಾಗರಿಕರ ಖಾಸಗಿ ಡೇಟಾವನ್ನು ಜಾಹೀರಾತು ಉದ್ದೇಶಗಳಿಗಾಗಿ ಬಳಸಿಕೊಳ್ಳುವುದನ್ನು ತೀವ್ರವಾಗಿ ಖಂಡಿಸಿತು. ಇದೇ ಸಂದರ್ಭದಲ್ಲಿ, ಡೇಟಾ ದುರುಪಯೋಗಕ್ಕಾಗಿ ಭಾರತೀಯ ಸ್ಪರ್ಧಾ ಆಯೋಗವು (CCI) ಮೆಟಾ ಸಂಸ್ಥೆಗೆ ವಿಧಿಸಿದ್ದ 213 ಕೋಟಿ ರೂ. ದಂಡವನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಬಹುರಾಷ್ಟ್ರೀಯ ಕಂಪನಿಯೊಂದರ ವ್ಯವಹಾರದ ಲಾಭಕ್ಕಾಗಿ ಭಾರತೀಯ ನಾಗರಿಕರ ಸಂವಿಧಾನಬದ್ಧ ‘ಗೌಪ್ಯತೆಯ ಹಕ್ಕು’ ಅಡಮಾನವಿಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕಂಪನಿಯ ಶೋಷಣಾತ್ಮಕ ನೀತಿಯನ್ನು ಟೀಕಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, “ನಮ್ಮ ದೇಶದ ಡೇಟಾದ ಒಂದೇ ಒಂದು ಅಂಕಿ-ಅಂಶವನ್ನೂ ಹಂಚಿಕೊಳ್ಳಲು ಬಿಡುವುದಿಲ್ಲ. ಸಂವಿಧಾನದ ಆಶಯ ಪಾಲಿಸಲು ಆಗದಿದ್ದರೆ ಇಲ್ಲಿ ವ್ಯವಹಾರ ನಡೆಸುವ ಅಗತ್ಯವಿಲ್ಲ” ಎಂದು ಹೇಳಿತು.
ಮೆಟಾ ಪರ ವಕೀಲರು ಸಂದೇಶಗಳು ‘ಎಂಡ್-ಟು-ಎಂಡ್ ಎನ್‌ಕ್ರಿಪ್ಟ್’ ಆಗಿವೆ ಎಂದು ವಾದಿಸಿದರೂ, ಡೇಟಾ ಹಂಚಿಕೆಯ ಗಂಭೀರತೆಯನ್ನು ಪರಿಗಣಿಸಿದ ಕೋರ್ಟ್ ಈ ವಾದವನ್ನು ಆಲಿಸಿ ತೀರ್ಪನ್ನು ಕಾಯ್ದಿರಿಸಿದೆ. ಫೆಬ್ರವರಿ 10ರಂದು ಈ ಕುರಿತು ವಿಸ್ತೃತ ಆದೇಶ ಹೊರಬೀಳಲಿದೆ. ಒಟ್ಟಿನಲ್ಲಿ, ತಾಂತ್ರಿಕ ದಿಗ್ಗಜ ಕಂಪನಿಗಳಿಗೆ ಭಾರತದ ನ್ಯಾಯಾಂಗವು ಈ ಮೂಲಕ ಬಲವಾದ ಸಂದೇಶ ರವಾನಿಸಿದೆ.



