Tuesday, February 3, 2026
Google search engine

Homeರಾಜ್ಯ1ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ–ನೋಟ್ ಬುಕ್

1ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ–ನೋಟ್ ಬುಕ್

ಬೆಂಗಳೂರು : ಕರ್ನಾಟಕದ 1ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ  ರಾಜ್ಯ ಸರ್ಕಾರ ಗುಡ್​ ನ್ಯೂಸ್ ನೀಡಿದೆ. ವಿದ್ಯಾ ವಿಕಾಸ ಯೋಜನೆಯಡಿ ಶಾಲಾ ಮಕ್ಕಳಿಗೆ ಪಠ್ಯಪುಸ್ತಕದ ಜೊತೆಗೆ ನೋಟ್ ಬುಕ್ ವಿತರಣೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಹೌದು..2026 -27ನೇ ಸಾಲಿನ 1ರಿಂದ 10ನೇ ತರಗತಿಯವರೆಗೆ ಓದುತ್ತಿರುವ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ನೀಡಲು ಅನುಮೋದನೆ ನೀಡಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಶುಭಮಂಗಳಾ ಅವರು ಆದೇಶ ಹೊರಡಿಸಿದ್ದಾರೆ.   ಇದರಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಓದುತ್ತಿರುವ ಸುಮಾರು 61 ಲಕ್ಷ ಮಕ್ಕಳಿಗೆ ಅನುಕೂಲವಾಗಲಿದೆ.ಈ ಮೂಲಕ ಮೊದಲ ಬಾರಿಗೆ 1ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕದ ಜೊತೆಗೆ ನೋಟ್‌ಬುಕ್ ಸಹ ವಿತರಣೆಗೆ ಮುಂದಾಗಿದೆ.

ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1ರಿಂದ 10ನೇ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, ಅಭ್ಯಾಸ ಪುಸ್ತಕ ಹಾಗೂ 1ರಿಂದ 12ನೇ ತರಗತಿಯವರೆಗೆ ದಿನಚರಿ ಪುಸ್ತಕ ವಿತರಣೆ ಸಂಬಂಧ ಶಿಕ್ಷಣ ಇಲಾಖೆಯು 30 ಕೋಟಿ 83 ಲಕ್ಷದ 25 ಸಾವಿರ ಹಣದ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಿತ್ತು. ಇದೀಗ ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆ ಸರ್ಕಾರ ಸಹ ಒಪ್ಪಿಗೆ ಸೂಚಿಸಿದ್ದು, 290.46 ಕೋಟಿ ರೂ ಅನುದಾನವನ್ನು ಶಾಲಾ ಶಿಕ್ಷಣ ಇಲಾಖೆಗೆ ಗ್ರೀನ್ ಸಿಗ್ನಲ್ ನೀಡಿದೆ. ಇದರ ಬೆನ್ನಲ್ಲೇ ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲೇ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಲು ತಯಾರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಶುಭ ಮಂಗಳ ಆದೇಶ ಹೊರಡಿಸಿದ್ದಾರೆ. ಇನ್ನು ಪಠ್ಯ ಪುಸ್ತಕದ ಕಾಗದ ಮತ್ತು ಮುದ್ರಣ ಗುಣಮಟ್ಟ ರಾಜಿ ಆಗೋ ಹಾಗಿಲ್ಲ . ಹೆಚ್ಚುವರಿ ಪುಸ್ತಕಕ್ಕೆ ಬೇಡಿಕೆ ಸಲ್ಲಿಸಿ ಕಳ್ಳಾಟ ಆಡೋ ಹಾಗಿಲ್ಲ . ಸರ್ಕಾರದ ಹಣ ದುರುಪಯೋಗ ಮಾಡಿದ್ರೆ ಕಠಿಣ ಕ್ರಮ ಎಂದು ಆದೇಶದಲ್ಲಿ ಎಚ್ಚರಿಕೆ ನೀಡಿದ್ದಾರೆ.

ಇನ್ನು 1ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಸರ್ಕಾರದ ಕಡೆಯಿಂದಲೇ ಪಠ್ಯ ಪುಸ್ತಕ ಹಾಗೂ ನೋಟ್ ಬುಕ್ ಉಚಿತವಾಗಿ ನೀಡುವುದರಿಂದ ಪೋಷಕರ ಹೊರೆ ತಪ್ಪಲಿದೆ. 1ರಿಂದ 10ನೇ ತರಗತಿ ಮಕ್ಕಳಿಗೆ ಶಾಲೆಯಲ್ಲಿ ಪಠ್ಯ ಪುಸ್ತಕ ನೀಡಲಾಗುತ್ತಿತ್ತಾದರೂ ಪೋಷಕರು ನೋಟ್ ಬುಕ್ ಕೊಡಿಸಬೇಕಿತ್ತು. ಇನ್ನೂ 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೂ ಸಹ ಪುಸ್ತಕ ನೀಡುತ್ತಿರುವುದರಿಂದ ಪೋಷಕರ ಹೊರೆ ಕಡಿಮೆಯಾಗಲಿದೆ.

ಸರ್ಕಾರಿ ಶಾಲೆಗಳ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ದ್ವಿಭಾಷಾ ಬಾಲ ಚೇತನ ಚಟುವಟಿಕೆ ಪುಸ್ತಕಗಳು, ಸರ್ಕಾರಿ ಶಾಲೆಗಳ 4ರಿಂದ 9ನೇ ತರಗತಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಅಭ್ಯಾಸ ಪುಸ್ತಕ ಮತ್ತು ಸರ್ಕಾರಿ ಶಾಲಾ ಕಾಲೇಜುಗಳ ಪೂರ್ವ ಪ್ರಾಥಮಿಕ ತರಗತಿಗಳಿಂದ 12ನೇ ತರಗತಿಯವರೆಗೆ ದಿನಚರಿ ಪುಸ್ತಕ ಮತ್ತು 1ರಿಂದ 10ನೇ ತರಗತಿಯವರೆಗೆ ಮೌಲ್ಯ ಶಿಕ್ಷಣ ಪುಸ್ತಕಗಳನ್ನು ವಿತರಿಸಲು ಸೂಚಿಸಲಾಗಿದೆ.

ಕೆಟಿಪಿಪಿ ಕಾಯ್ದೆ 1999ರ ಅಡಿ ರೂಪಿಸಿದ ನಿಯಮಗಳಂತೆ ಪಾರದರ್ಶಕ ಟೆಂಡರ್ ಕರೆದು ಕರ್ನಾಟಕ ಪುಸ್ತಕ ಸಂಘದ ಮೂಲಕ ಮುದ್ರಿಸಿ ವಿತರಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಸೂಚಿಸಲಾಗಿದೆ. ಒಟ್ಟು 264.62 ಕೋಟಿ ವೆಚ್ಚದಲ್ಲಿ ವಿದ್ಯಾ ವಿಕಾಸ ಯೋಜನೆ ಅಡಿ ಪುಸ್ತಕಗಳ ವಿತರಣೆಗೆ ಅನುಮೋದನೆ ನೀಡಲಾಗಿದೆ. ಸಮಗ್ರ ಶಿಕ್ಷಣ ಕರ್ನಾಟಕದಡಿ ಹೊಸದಾಗಿ ಅನುಷ್ಠಾನಗೊಳಿಸುವ ಕಾರ್ಯಕ್ರಮಗಳಿಗೆ 25.841 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಶೈಕ್ಷಣಿಕ ವರ್ಷದ ಆರಂಭದಲ್ಲೇ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಬೇಕು. ಎಸ್‌ಎಟಿಎಸ್ ಮೂಲಕ ಶಾಲೆಗಳಿಂದ ಪಠ್ಯಪುಸ್ತಕಗಳ ಬೇಡಿಕೆಯ ಮಾಹಿತಿ ಪಡೆದು ಎಲ್ಲಾ ವಿವರ ದಾಖಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದೆ.

RELATED ARTICLES
- Advertisment -
Google search engine

Most Popular