ಮಂಗಳೂರು : ಮೆಟ್ರೋ ದರ ಬಗ್ಗೆ ತೀರ್ಮಾನ ಮಾಡಲು ಪ್ರತ್ಯೇಕ ಸಮಿತಿ ಇದೆ. ಕೇಂದ್ರ ಸರ್ಕಾರದ ಕಾರ್ಯದರ್ಶಿ ಇದರ ಮುಖ್ಯಸ್ಥರು. ಮೆಟ್ರೋ ದರ ಏರಿಕೆ ವಿಚಾರವಾಗಿ ನಮ್ಮ ಅಭಿಪ್ರಾಯವನ್ನು ಕೇಳಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಈ ಬಗ್ಗೆ ಮಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಬೆಂಗಳೂರಿಗೆ ಮರಳಿದ ಬಳಿಕ ಈ ಬಗ್ಗೆ ಚರ್ಚೆ ಮಾಡುವೆ. ಇನ್ನೂ ಜನರಿಗೆ ತೊಂದರೆ ನೀಡಲು ನಮಗೆ ಇಷ್ಟವಿಲ್ಲ. ಆರ್ಥಿಕ ಸ್ಥಿತಿಗತಿ ಪರಿಶೀಲನೆ ಮಾಡುತ್ತೇನೆ ಎಂದು ತಿಳಿಸಿದರು.
ಬಳಿಕ ದಲಿತ ಸಂಘಟನೆಗಳು ಪರಮೇಶ್ವರ್ ಅವರು ಸಿಎಂ ಆಗಬೇಕು ಎಂದು ಆಸೆ ಪಟ್ಟಿರುವ ಬಗ್ಗೆ ಕೇಳಿದಾಗ, ಅವರವರ ಅಭಿಮಾನಿಗಳು ಆಸೆ ಪಡುತ್ತಾರೆ. ಅದನ್ನು ನಾನು ಬೇಡ ಎಂದು ಹೇಳಲು ಆಗುವುದಿಲ್ಲ ಎಂದರು.
ರಾಜ್ಯ ಬಜೆಟ್ ಬಳಿಕ ಅಧಿಕಾರ ಹಂಚಿಕೆ ಆಗುವುದೇ ಎಂದು ಕೇಳಿದಾಗ, ಸಮಯವೇ ಉತ್ತರ ನೀಡಲಿದೆ ಎಂದರು.



