ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಜಿಲ್ಲಾಡಳಿತ ಹಾಗೂ ವಿವಿಧ ಬ್ಯಾಂಕ್‍ಗಳ ಒಕ್ಕೂಟ, ದಕ್ಷಿಣ ಕನ್ನಡ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ “ಬಾಲ್ಯ ವಿವಾಹ ಮುಕ್ತ ಭಾರತ” ಅಭಿಯಾನದಡಿ ಕಾನೂನು ಅರಿವು ಕಾರ್ಯಗಾರ ಶನಿವಾರ ಮಂಗಳೂರು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ನ್ಯಾಯಾಧೀಶ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್ ಶಶಿಧರ ಶೆಟ್ಟಿ ಮಾತನಾಡಿ, ‘ಬಾಲ್ಯ ವಿವಾಹ’ ಪದ್ಧತಿಯು ಮಕ್ಕಳ ಬಾಲ್ಯವನ್ನು ಹಾಳುಮಾಡುತ್ತದೆ. ಈ ಪದ್ಧತಿಯನ್ನು ನಿರ್ಮೂಲನೆಗೊಳಿಸುವ ಅಗತ್ಯವಿದೆ. ಬಾಲ್ಯ ವಿವಾಹವೆಂಬ ಸಾಮಾಜಿಕ ಪಿಡುಗನ್ನು ನಿವಾರಿಸಲು ಅರಿವು ಮೂಡಿಸುವುದು ಅಗತ್ಯ ಎಂದು ಅವರು ಹೇಳಿದರು. ಬಾಲ್ಯ ವಿವಾಹವು ಹೆಣ್ಣು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಹಕ್ಕುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದರು.
ಮಕ್ಕಳಲ್ಲಿ ಕಾನೂನಿನ ಬಗ್ಗೆ ಅರಿವು ಇರಬೇಕು. ಕಾನೂನಿನ ತೊಡಕುಗಳಿಗೆ ಸಿಕ್ಕಿಕೊಳ್ಳದೆ ಸತ್ಪ್ರಜೆಯಾಗಿ ಬಾಳಬೇಕು ಎಂದು ಅವರು ಹೇಳಿದರು. ಮಕ್ಕಳು ಈ ದೇಶದ ಭವಿಷ್ಯ. ಅವರು ಕಾನೂನಿನ ಮಾಹಿತಿಗಳನ್ನು ತಿಳಿದುಕೊಳ್ಳಬೇಕು. 18 ವರ್ಷ ತುಂಬದೆ ವಾಹನ ಓಡಿಸಬಾರದು. ಕಾನೂನಿನ ನಿಯಮಗಳ ಉಲ್ಲಂಘನೆಯ ಬಗ್ಗೆ ಅರಿವು ಇರಬೇಕು ಎಂದು ಹೇಳಿದರು. ಸಾರ್ವಜನಿಕರಲ್ಲಿ ಕಾನೂನಿನ ಅರಿವಿನ ಬಗ್ಗೆ ಮಾಹಿತಿ ಇರಬೇಕು. ಕಾನೂನಿನ ಜ್ಞಾನ ಬಹಳ ಮುಖ್ಯ. ವಾಹನ ಚಲಾಯಿಸುವಾಗ ಹೆಲ್ಮೆಟ್ ಕಡ್ಡಾಯವಾಗಿ ಧರಿಸುವ ಬಗ್ಗೆ, ಲೈಸನ್ಸ್ ,ಇನ್ಸುರೆನ್ಸ್ ಬಗ್ಗೆ ಮಾಹಿತಿ ಹೊಂದಿರಬೇಕು ಎಂದು ಹೇಳಿದರು.
ಮಕ್ಕಳ ಮೇಲೆ ದೌರ್ಜನ್ಯ ನಡೆದರೆ ಅದನ್ನು ಪ್ರತಿರೋಧಿಸಿ, ಪೋಲಿಸ್ ಇಲಾಖೆಗೆ ತಿಳಿಸಬೇಕು. ಇತ್ತೀಚೆಗೆ ಹುಡುಗರ ಮೇಲೆಯೂ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಆದ್ದರಿಂದ ಪೋಷಕರು ಮಕ್ಕಳ ಮೇಲೆ ಗಮನ ವಹಿಸಬೇಕು ಎಂದು ಹೇಳಿದರು. ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನಾಗಿಸಲು ಎಲ್ಲರ ಪಾತ್ರ ಅಗತ್ಯ ಎಂದು ಅವರು ಹೇಳಿದರು. ಬಾಲ್ಯ ವಿವಾಹವನ್ನು ತೊಡೆದು ಹಾಕಬೇಕು .ದಕ್ಷಿಣ ಕನ್ನಡ ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಪೋಷಕರು ಮತ್ತು ಸಮಾಜದ ಜವಾಬ್ದಾರಿ ಬಹಳ ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಹೆಚ್.ವಿ ಮಾತನಾಡಿ, ದೇಶದ ಸತ್ಪ್ರಜೆಗಳಾಗಿ ಇಂತಹ ಅನಿಷ್ಟ ಬಾಲ್ಯ ವಿವಾಹ ಪದ್ಧತಿಯನ್ನು ಹೊಡೆದೋಡಿಸಲು ಎಲ್ಲರೂ ಸಹಕರಿಸಬೇಕು. ಮಕ್ಕಳು ಯಾವುದೇ ತೊಂದರೆಗೊಳಗಾದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೆರವು ಪಡೆದುಕೊಳ್ಳುವುದರಿಂದ ಸೂಕ್ತ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಖಾಯಂ ಜನತಾ ನ್ಯಾಯಾಲಯದ ಅಧ್ಯಕ್ಷ ಜೈಶಂಕರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ, ಆಡಳಿತ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶಶಿಧರ ಜಿ.ಎಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಉಸ್ಮಾನ್.ಎ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ರಾಜೇಶ್ವರಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಹೇಮಲತಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಬಿಂದಿಯಾ ಎನ್ ನಾಯಕ್ ಮತ್ತಿತರರು ಇದ್ದರು.
ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸ ಸ್ವಾಗತಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನ್ಯಾಯವಾದಿ ಮಾನಸ ಹೆಗ್ಡೆ ನಿರೂಪಿಸಿದರು.
ವರದಿ: ಶಂಶೀರ್ ಬುಡೋಳಿ



