ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯ ಹಣ ದುರುಪಯೋಗವಾಗುವುದನ್ನು ತಡೆಯಲು ಈಗ ಹೊಸ ನಿಯಮ ಜಾರಿಗೆ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಮರಣ ಹೊಂದಿರುವ ಫಲಾನುಭವಿಗಳ ಖಾತೆಗೂ ಹಣ ಜಮಾ ಆಗುತ್ತಿರುವುದನ್ನು ತಪ್ಪಿಸಲು ‘ಜೀವಿತ ಪ್ರಮಾಣಪತ್ರ’ ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಆಲೋಚಿಸುತ್ತಿದೆ. ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರು ಹಾಗೂ ಎಂಎಲ್‌ಸಿ ಆಗಿರುವ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿದ್ದರು.
ದಿನೇಶ್ ಗೂಳಿಗೌಡ ಅವರ ಮನವಿಯನ್ನು ಪುರಸ್ಕರಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಈ ಕೂಡಲೇ ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಸೂಚನೆ ನೀಡಿದ್ದಾರೆ. ನಿವೃತ್ತ ಸರ್ಕಾರಿ ನೌಕರರು ಪಿಂಚಣಿ ಪಡೆಯಲು ಪ್ರತಿ ವರ್ಷ ಬ್ಯಾಂಕ್‌ಗಳಿಗೆ ‘ಜೀವಿತ ಪ್ರಮಾಣಪತ್ರ’ ಸಲ್ಲಿಸುವುದು ಹೇಗೆ ಕಡ್ಡಾಯವೋ, ಅದೇ ಮಾದರಿಯನ್ನು ಗೃಹಲಕ್ಷ್ಮಿ ಯೋಜನೆಗೂ ತರಲು ಉದ್ದೇಶಿಸಲಾಗಿದೆ.
ಯೋಜನೆಯಡಿ ಸುಮಾರು 1.24 ಕೋಟಿ ಫಲಾನುಭವಿಗಳಿದ್ದು, ಇದಕ್ಕಾಗಿ ಸರ್ಕಾರ ₹57,300 ಕೋಟಿಗೂ ಅಧಿಕ ಹಣ ವ್ಯಯಿಸಿದೆ. ಮರಣ ಹೊಂದಿದವರ ಹೆಸರಿನಲ್ಲಿ ಹಣ ಪಾವತಿಯಾಗುತ್ತಿರುವುದನ್ನು ತಡೆದು, ಸರ್ಕಾರದ ಹಣ ಸೋರಿಕೆಯನ್ನು ನಿಲ್ಲಿಸುವುದು ಇದರ ಮೂಲ ಉದ್ದೇಶವಾಗಿದೆ.
ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯು ಯೋಜನೆಯ ಫಲಾನುಭವಿ ಮಹಿಳೆಯಾಗಿರುತ್ತಾರೆ. ಗೃಹಲಕ್ಷ್ಮಿ ಯೋಜನೆಯಡಿ 1,24,12,543 ಅರ್ಹ ಫಲಾನುಭವಿಗಳಿಗೆ ಈವರೆಗೂ ಸುಮಾರು 57,300 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ಪಾವತಿ ಮಾಡಲಾಗಿದೆ. ಈ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಲ್ಲಿ ಮರಣ ಹೊಂದಿರುವವರ ಮಾಹಿತಿಗಳು ಕಾಲಕಾಲಕ್ಕೆ ಪರಿಶೀಲನೆ ನಡೆಸಬೇಕು. ಮರಣ ಹೊಂದಿರುವ ಫಲಾನುಭವಿಗಳಗೆ ಧನಸಹಾಯ ಪಾವತಿಯಾಗುವದನ್ನು ತಪ್ಪಿಸಬೇಕಿದೆ. ನಿವೃತ್ತ ಸರ್ಕಾರಿ ನೌಕರರು ಪಿಂಚಣಿ ಪಡೆಯಲು ಪ್ರತಿ ವರ್ಷ ಬ್ಯಾಂಕ್‌ಗಳಿಗೆ ತಮ್ಮ ಜೀವಿತ ಪ್ರಮಾಣ ಸಲ್ಲಿಸುವುದು ಹೇಗೆ ಕಡ್ಡಾಯ ಮಾಡಿದ್ದಾರೆ. ಅದೇ ಮಾದರಿಯಲ್ಲಿ, ಗೃಹಲಕ್ಷ್ಮಿ ಯೋಜನೆಯಡಿಯ ಅರ್ಹ ಫಲಾನುಭವಿಗಳಿಗೆ ಜೀವಿತ ಪ್ರಮಾಣ ಸಲ್ಲಿಸುವುದನ್ನು ಕಡ್ಡಾಯಗೊಳಿಸಬೇಕು ಎಂದು ಮನವಿ ಮಾಡಿದ್ದರು.



