ಬೆಂಗಳೂರು : ದೇಶದ ಪ್ರಪ್ರಥಮ ನಿರ್ಮಾಣ ಕಾಮಗಾರಿ ಮತ್ತು ಮೂಲಸೌಕರ್ಯ ಸಾಧನ ಪರೀಕ್ಷಾ ಮೂಲಸೌಕರ್ಯ ಸ್ಥಾವರ ನಿರ್ಮಾಣಕ್ಕೆ ತಾವು ಮಂಡ್ಯ ಜಿಲ್ಲೆಯಲ್ಲಿ ಅಪೇಕ್ಷಿಸಿದ್ದ 100 ಎಕರೆ ಜಮೀನು ಲಭ್ಯವಿದೆ. ಈ ಸಂಬಂಧ ಭಾರತೀಯ ಆಟೋಮೋಟೀವ್ ಸಂಶೋಧನಾ ಒಕ್ಕೂಟಕ್ಕೆ ಸೂಕ್ತ ನಿರ್ದೇಶನ ನೀಡಿ, ಯೋಜನಾ ಪ್ರಸ್ತಾವನೆ ಕಳಿಸಿಕೊಡಲು ಸೂಚಿಸಬೇಕು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದಾರೆ.
ಇನ್ನೂ ಕುಮಾರಸ್ವಾಮಿ ಅವರು ಈ ಸಂಬಂಧವಾಗಿ ಜ.8ರಂದು ಬರೆದಿದ್ದ ಪತ್ರಕ್ಕೆ ಸೋಮವಾರ ಉತ್ತರಿಸಿರುವ ಪಾಟೀಲರು, ಮಂಡ್ಯ ತಾಲೂಕಿನ ಬಸರಾಳು ಹೋಬಳಿಯ ಮುದ್ದನಘಟ್ಟ ಮತ್ತು ಹೆಗ್ಗಡಿತಿಹಳ್ಳಿ ವ್ಯಾಪ್ತಿಯಲ್ಲಿ 105 ಎಕರೆ ಸರಕಾರಿ ಭೂಮಿ ಲಭ್ಯವಿದೆ ಎಂದು ಅಲ್ಲಿನ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಈ ಭೂಮಿಯು ಮಂಡ್ಯ-ನಾಗಮಂಗಲ ರಾಜ್ಯ ಹೆದ್ದಾರಿಯಿಂದ ಕೇವಲ 500 ಮೀ. ದೂರದಲ್ಲಿದೆ ಎಂದು ಮಾಹಿತಿ ನೀಡಿದ್ದು, ಉದ್ದೇಶಿತ ಸ್ಥಾವರ ಸ್ಥಾಪಿಸಲು ನೀವು ಕೇಳಿದ್ದಕ್ಕಿಂತ ಹೆಚ್ಚಿನ ಭೂಮಿಯಿದೆ. ಆದ್ದರಿಂದ ಎ.ಆರ್.ಎ.ಐ. ಪ್ರತಿನಿಧಿಗಳು ಮತ್ತು ನಿಮ್ಮ ಸಚಿವಾಲಯದ ತಂಡ ಎರಡೂ ರಾಜ್ಯಕ್ಕೆ ಭೇಟಿ ನೀಡಿ, ಈ ಭೂಮಿಯು ತಮಗೆ ಸೂಕ್ತವಾಗಿದೆಯೇ ಎನ್ನುವುದನ್ನು ನಿರ್ಧರಿಸಲು ಜಂಟಿ ಪರಿಶೀಲನೆ ನಡೆಸುವಂತೆ ತ್ವರಿತವಾಗಿ ಸೂಚಿಸಬೇಕು. ಇನ್ನೂ ಇದು ಸೂಕ್ತವಾಗಿದೆ ಎನಿಸಿದರೆ, ನಂತರ ಇದನ್ನು ಉದ್ದೇಶಿತ ಸ್ಥಾವರ ಸ್ಥಾಪನೆಗೆ ಮಂಜೂರು ಮಾಡಲಾಗುವುದು ಎಂದು ಹೇಳಿದ್ದಾರೆ.
ಈ ಸಂಬಂಧವಾಗಿ ಎ.ಆರ್.ಎ.ಐ. ಒಕ್ಕೂಟವು ರಾಜ್ಯ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್ ಸೆಲ್ವಕುಮಾರ್ ಅವರೊಂದಿಗೆ ನೇರವಾಗಿ ವ್ಯವಹರಿಸಬಹುದು ಎಂದು ಪಾಟೀಲ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.



