ಬೆಂಗಳೂರು : ಹಿರಿಯ ಪತ್ರಕರ್ತ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ʼಹಿಂದೂ ರಾಮಯ್ಯʼ ಎಂದೇ ಚಿರಪರಿಚಿತರಾದ ಪಿ.ರಾಮಯ್ಯ(93) ಅವರು ನಿಧನರಾಗಿದ್ದು, ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಬಹು ಅಂಗಾಂಗ ವೈಫಲ್ಯದಿಂದಾಗಿ ಮಂಗಳವಾರ ರಾತ್ರಿ 9 ಗಂಟೆಗೆ ಆಸ್ಪತ್ರೆಯಲ್ಲಿ ಅಸುನೀಗಿದರು ಎಂದು ಅವರ ಪುತ್ರ ಡಾ.ಬಾಲಜಿ ತಿಳಿಸಿದ್ದಾರೆ.
ರಾಮಯ್ಯ ಅವರ ಅಗಲುವಿಕೆಗೆ ಸಿಎಂ ಸಿದ್ದರಾಮಯ್ಯ, ಆದಿಚುಂಚನಗಿರಿ ಮಠಾಧ್ಯಕ್ಷರಾಗಿರುವ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
1933 ಸೆಪ್ಟೆಂಬರ್ 12 ರಂದು ಜನಿಸಿದ ರಾಮಯ್ಯ ಅವರು ದಿ ಹಿಂದೂ ಪತ್ರಿಕೆಯಲ್ಲಿ ಐದು ದಶಕಗಳ ಕಾಲ ವಿವಿಧ ಹುದ್ದೆಗಳಲ್ಲಿ ಪತ್ರಕರ್ತರಾಗಿ, ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅವರಿಗೆ ಇಬ್ಬರು ಪುತ್ರರು, ಪುತ್ರಿ, ಸೊಸೆಯಂದಿರು, ಮೊಮ್ಮಕ್ಕಳು, ಅಪಾರ ಬಂಧು ಬಳಗ ಇದ್ದಾರೆ. ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕ ದರ್ಶನಕ್ಕಾಗಿ ಬುಧವಾರ ಬೆಳಗ್ಗೆ 9 ಗಂಟೆಯಿಂದ ಸದಾಶಿವನಗರ ಕ್ಲಬ್ ಸಮೀಪದಲ್ಲಿ ವಾಸವಾಗಿದ್ದ ಮನೆ 295/12/1 7 ನೇ ಮೇನ್ 16 ನೇ ಕ್ರಾಸ್ ಇಡಲಾಗುವುದು ಎಂದು ಅವರ ಸೋದರಳಿಯ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರಾಗಿರುವ ಗಿರೀಶ್ ಲಿಂಗಣ್ಣ ಅವರು ಮಾಹಿತಿ ನೀಡಿದ್ದಾರೆ.
ಇನ್ನೂ ಪಿ.ರಾಮಯ್ಯ (ಹಿಂದೂ ರಾಮಯ್ಯ) ಅವರು ಕರ್ನಾಟಕದ ಪ್ರಸಿದ್ಧ ಹಿರಿಯ ಪತ್ರಕರ್ತರು, ಇವರು ಸುಮಾರು 45 ವರ್ಷಗಳ ಕಾಲ The Hindu ಪತ್ರಿಕೆಯ ಬ್ಯೂರೋ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು. ಸತ್ಯ ಮತ್ತು ಪ್ರಾಮಾಣಿಕತೆಗೆ ಬದ್ಧರಾಗಿದ್ದ ಇವರನ್ನು ‘ಪತ್ರಿಕೋದ್ಯಮದ ತಪಸ್ವಿ’ ಎಂದು ಸಹ ಕರೆಯಲಾಗುತ್ತದೆ. ಇವರ ಅನುಭವ ಕಥನ ನಾನು ಹಿಂದೂ ರಾಮಯ್ಯ ಕೃತಿಯು ಇವರ ಬದ್ಧತೆಯನ್ನು ಎತ್ತಿಹಿಡಿಯುತ್ತದೆ. ಪಿ.ರಾಮಯ್ಯನವರು ತಮ್ಮ ವೃತ್ತಿ ಜೀವನದಲ್ಲಿ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿನ ಸಂಪರ್ಕಗಳನ್ನು ಬಳಸಿ, ಸರ್ಕಾರದ ನೀತಿ ನಿರೂಪಣೆಗೆ ಕೊಡುಗೆ ನೀಡಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿಗೆ ಪಾತ್ರರಾಗಿದ್ದ ರಾಮಯ್ಯ ಅವರು ಪತ್ರಿಕಾ ಅಕಾಡೆಮಿ ಹಾಗು ವಿವಿಧ ಪತ್ರಕರ್ತ ಕಲ್ಯಾಣ ಸಮಿತಿ ಸದಸ್ಯರಾಗಿದ್ದರು. ಅಲ್ಲದೆ ಸಣ್ಣ ಪತ್ರಿಕೆಗಳ ಸಮಸ್ಯೆಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿದ್ದ ರಾಮಯ್ಯ ಅವರು ಸಣ್ಣ ಪತ್ರಿಕೆಗಳ ಸಮಸ್ಯೆಗೆ ಪರಿಹಾರ ದೊರಕಿಸಿದ್ದರು.
ಸಿಎಂ ಸಿದ್ದರಾಮಯ್ಯ ಸಂತಾಪ : ಹಿರಿಯ ಪತ್ರಕರ್ತ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಪಿ.ರಾಮಯ್ಯ ಅವರ ನಿಧನದಿಂದ ದು:ಖಿತನಾಗಿದ್ದೇನೆ. ‘ದಿ ಹಿಂದೂ’ ಪತ್ರಿಕೆಯಲ್ಲಿ ಐದು ದಶಕಗಳಿಗಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ರಾಮಯ್ಯ ಅವರು ನನ್ನ ಹಿತಚಿಂತಕರಾಗಿದ್ದರು. ಪತ್ರಕರ್ತರಾಗಿ ಸದಾ ರಾಜ್ಯದ ಹಿತಕ್ಕಾಗಿ ಕೆಲಸ ಮಾಡಿದ್ದ ರಾಮಯ್ಯ ಅವರಲ್ಲಿದ್ದ ರಾಜಕೀಯ, ಇತಿಹಾಸ, ಸಂಸ್ಕೃತಿ ಮತ್ತು ಸಾಮಾಜಿಕ ವಿದ್ಯಮಾನಗಳ ಜ್ಞಾನ-ಅನುಭವ ಬೆರಗುಗೊಳಿಸುತಿತ್ತು ಎಂದು ಸಿಎಂ ಸಂತಾಪ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿಯೂ ಅವರು ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದರು. ಸಣ್ಣ ಪತ್ರಿಕೆಗಳ ಸಮಸ್ಯೆಗಳ ಅಧ್ಯಯನಕ್ಕಾಗಿ ರಚಿಸಲಾಗಿದ್ದ ಸಮಿತಿಯ ಅಧ್ಯಕ್ಷರಾಗಿ ಸಣ್ಣ ಪತ್ರಿಕೆಗಳ ಸಮಸ್ಯೆಗೆ ಪರಿಹಾರ ದೊರಕಿಸಿಕೊಡಲು ಶ್ರಮಿಸಿದ್ದರು. ರಾಮಯ್ಯ ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ. ಅವರ ಕುಟುಂಬದ ಸದಸ್ಯರ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದಿದ್ದಾರೆ.
ಕುಮಾರಸ್ವಾಮಿ ಸಂತಾಪ : ಹಿರಿಯರು, ವಿಧಾನ ಪರಿಷತ್ ಮಾಜಿ ಸದಸ್ಯರು, ಕರ್ನಾಟಕ ಪತ್ರಿಕೋದ್ಯಮದ ಮಹಾವೃಕ್ಷ ಎಂದೇ ಹೆಸರಾಗಿದ್ದ ನನ್ನ ಗುರು, ಪಿತೃ ಸಮಾನರೂ ಆಗಿದ್ದ ಶ್ರೀ ಪಿ.ರಾಮಯ್ಯನವರು ನಿಧನರಾದರೆಂಬ ವಾರ್ತೆ ಕೇಳಿ ಬಹಳ ದುಃಖವಾಯಿತು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಮಾನವೀಯತೆ, ಪ್ರಾಮಾಣಿಕತೆ ಹಾಗೂ ಮೌಲ್ಯಾಧರಿತ ಪತ್ರಿಕಾ ಧರ್ಮದ ಶ್ರೇಷ್ಠ ಪತಿನಿಧಿಯಾಗಿದ್ದ ಅವರು, ಜನಮಾನಸದಲ್ಲಿ ಹಿಂದೂ ರಾಮಯ್ಯ ಎಂದೇ ಜನಪ್ರಿಯರಾಗಿದ್ದರು.
ಸರಳತೆ ಸಜ್ಜನಿಕೆಯ ಸಾಕಾರಮೂರ್ತಿ ಆಗಿದ್ದರು. ವೈಯಕ್ತಿಕವಾಗಿ ಅವರು ನನಗೆ ಅತ್ಯಂತ ಆತ್ಮೀಯರು ಹಾಗೂ ಅವರ ಮೇಲೆ ಅಪಾರ ಗೌರವ ಹೊಂದಿದ್ದೆ. ಹಾಗೆಯೇ ನನ್ನ ಬಗ್ಗೆಯೂ ಅವರು ವಿಶೇಷ ಮಮತೆ, ವಾತ್ಸಲ್ಯ ಇಟ್ಟುಕೊಂಡಿದ್ದರು. ಅನೇಕ ಕಠಿಣ ಸಂದರ್ಭಗಳಲ್ಲಿ ಮಾರ್ಗದರ್ಶನ ಮಾಡಿದ್ದರು. ವಿಧಾನ ಪರಿಷತ್ ಸದಸ್ಯರಾಗಿಯೂ ಜನಸೇವೆ ಮಾಡಿ ಆ ಸದನದ ಕೀರ್ತಿ, ಹಿರಿಮೆಯನ್ನು ಹೆಚ್ಚಿಸಿದ್ದರು. ಅವರ ಅಗಲಿಕೆ ವೈಯಕ್ತಿಕವಾಗಿ ಬಹಳ ದುಃಖ ತಂದಿದೆ ಎಂದಿದ್ದಾರೆ.
ಭಗವಂತ ಅವರ ಆತ್ಮಕ್ಕೆ ಸದ್ಗತಿ ನೀಡಲಿ. ಈ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ, ಅದರಲ್ಲಿಯೂ ವಿಶೇಷವಾಗಿ ಅವರ ಧರ್ಮಪತ್ನಿ ಶ್ರೀಮತಿ ರಾಮಯ್ಯ ಅವರಿಗೆ ಮತ್ತು ಶ್ರೀಯುತರ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.



