ಮೈಸೂರು: ಕಿರಿಯ ಪವರ್ ಮ್ಯಾನ್‌ಗಳಾಗಿ ನೇಮಕಗೊಂಡಿರುವ ಅಭ್ಯರ್ಥಿಗಳು ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು ಎಂದು ಶಾಸಕರು ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ಅಧ್ಯಕ್ಷರಾದ ರಮೇಶ್ ಬಂಡಿಸಿದ್ದೇಗೌಡರು ಕರೆ ನೀಡಿದರು.
ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್ ನಿಗಮ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಕಿರಿಯ ಪವರ್ ಮ್ಯಾನ್ ಹುದ್ದೆಗಳ ನೇಮಕಾತಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಸ್ಥಳ ನಿಯುಕ್ತಿಗಾಗಿ ಕೌನ್ಸಿಲಿಂಗ್ ಮತ್ತು ನೇಮಕಾತಿ ಆದೇಶ ಪತ್ರಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಉದ್ಯೋಗ ದೊರೆಯುವುದೆ ಕಷ್ಟಕರವಾಗಿದ್ದು, ಇಂತಹ ಸಂದರ್ಭದಲ್ಲಿ, ಅಭ್ಯರ್ಥಿಗಳು ತಮಗೆ ಸಿಕ್ಕಿರುವ ಕೆಲಸವನ್ನು ಶ್ರದ್ಧೆ ಹಾಗೂ ನಿಷ್ಠೆಯಿಂದ ನಿರ್ವಹಿಸಬೇಕು. ಕರ್ತವ್ಯದ ಸಂದರ್ಭದಲ್ಲಿ ಯಾವುದೇ ರೀತಿಯ ದುಷ್ಚಟಗಳಿಗೆ ಬಲಿಯಾಗದೆ, ಆರೋಗ್ಯದ ಬಗ್ಗೆ ಕಾಳಜಿವಹಿಸಿ, ತಮ್ಮ ಇತಿಮಿತಿ ಅರಿತು ಕಾರ್ಯನಿರ್ವಹಿಸಬೇಕು” ಎಂದು ಕಿವಿಮಾತು ನೀಡಿದರು.
ಜವಾಬ್ದಾರಿ ಅರಿತುಕೊಳ್ಳಿ:
“ವಿದ್ಯುತ್ ಕ್ಷೇತ್ರದಲ್ಲಿ ಕೆಲಸ ಮಾಡುವಾಗ ಬೇಜವಾಬ್ದಾರಿ ಅಥವಾ ಸ್ವಲ್ಪ ಮೈಮರೆತರೂ ಜೀವಕ್ಕೆ ಅಪಾಯ ಸಂಭವಿಸಬಹುದು. ಆದ್ದರಿಂದ ತರಬೇತಿ ಅವಧಿಯಲ್ಲಿ ನೀಡುವ ಸಲಹೆಗಳನ್ನು ಪರಿಪೂರ್ಣವಾಗಿ ಅರಿತು, ಯಾವುದೇ ಅನುಮಾನಗಳಿದ್ದರೂ ಪರಿಹರಿಸಿಕೊಳ್ಳಬೇಕಿದೆ. ಹಿರಿಯ ಅಧಿಕಾರಿಗಳು ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದ ಅವರು, ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಜನಸಾಮಾನ್ಯರು ದೂರು, ಸಮಸ್ಯೆಗಳನ್ನು ತಿಳಿಸಿದಾಗ ಸೌಜನ್ಯ ಹಾಗೂ ಗೌರವದಿಂದ ವರ್ತಿಸಬೇಕು” ಎಂದು ಸಲಹೆ ನೀಡಿದರು.

“ಸರ್ಕಾರ ಪಾರದರ್ಶಕ ಹಾಗೂ ಪ್ರಾಮಾಣಿಕ ರೀತಿಯಲ್ಲಿ ರಾಜ್ಯದೆಲ್ಲೆಡೆ ಮೂರು ಸಾವಿರಕ್ಕೂ ಹೆಚ್ಚು ಪವರ್ ಮ್ಯಾನ್‌ಗಳ ನೇಮಕಾತಿ ನಡೆಸಿದ್ದು, ಯಾವುದೇ ಗೊಂದಲ ಅಥವಾ ಅಡೆತಡೆ ಇಲ್ಲದೆ ಮಾರ್ಗಸೂಚಿಗಳ ಪ್ರಕಾರ ಆಯ್ಕೆ ಪ್ರಕ್ರಿಯೆ ನಡೆದಿದೆ. ನಿಮ್ಮ ಅರ್ಹತೆಯ ಆಧಾರದ ಮೇಲೆಯೇ ಎಲ್ಲರ ಆಯ್ಕೆ ಮಾಡಲಾಗಿದೆ. ಯಾವುದೇ ಪ್ರಭಾವಗಳನ್ನು ಬಳಸದೆ ಸಿಕ್ಕಿರುವ ಕೆಲಸಕ್ಕೆ ಗೌರವವನ್ನು ನೀಡಿ, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು” ಎಂದು ತಿಳಿಸಿದರು.
ಮಧ್ಯವರ್ತಿಗಳಿಗೆ ಕಿವಿಗೊಡದಿರಿ :
ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು ಮಾತನಾಡಿ, “ಸರ್ಕಾರದ ಮಟ್ಟದಲ್ಲಿ ಸಿಎಂ, ಡಿಸಿಎಂ, ಇಂಧನ ಸಚಿವರು ಹಾಗೂ ನಿಗಮದ ಅಧ್ಯಕ್ಷರು ಉದ್ಯೋಗಾವಕಾಶ ಒದಗಿಸಿದ್ದಾರೆ. ಆದ್ದರಿಂದ ಅರ್ಹ ಅಭ್ಯರ್ಥಿಗಳು ಈ ಅವಕಾಶ ಸದ್ಬಳಕೆ ಮಾಡಿಕೊಳ್ಳಬೇಕು. ಯಾವುದೇ ರೀತಿಯ ಒತ್ತಡ, ಶಿಫಾರಸ್ಸು, ಪ್ರಭಾವ ಬೀರುವ ಪ್ರಯತ್ನಗಳಿಗೆ ಅವಕಾಶವಿಲ್ಲ. ಸಂಪೂರ್ಣ ಪಾರದರ್ಶಕವಾಗಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಹೀಗಾಗಿ ಮಧ್ಯವರ್ತಿಗಳ ಮಾತಿಗೆ ಕಿವಿಗೊಡದೆ, ಯಾವುದೇ ಪ್ರಭಾವ ಬೀರದೆ, ತಾವು ನಿಯೋಜನೆಗೊಳ್ಳುವ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಲು ವಿಶ್ವಾಸದಿಂದ ಮುಂದುವರಿಯಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸೆಸ್ಕ್ ಮುಖ್ಯ ಆರ್ಥಿಕ ಅಧಿಕಾರಿ ಜಿ. ರೇಣುಕಾ, ಪ್ರಧಾನ ವ್ಯವಸ್ಥಾಪಕಿ(ಆಂತರಿಕ ಲೆಕ್ಕಪರಿಶೋಧನೆ) ಲಿಂಗರಾಜಮ್ಮ, ಪ್ರಧಾನ ವ್ಯವಸ್ಥಾಪಕರು(ಆ ಮತ್ತು ಮಾ.ಸಂ) ಡಾ.ಬಿ.ಆರ್.ರೂಪ, ಹಾಸನ ವಿಭಾಗದ ಮುಖ್ಯ ಇಂಜಿನಿಯರ್ ಲೋಕೇಶ್ ಸೇರಿದಂತೆ ಇತರ ಅಧಿಕಾರಿಗಳಿದ್ದರು.
293 ಅಭ್ಯರ್ಥಿಗಳ ನೇಮಕಾತಿ
ಸೆಸ್ಕ್‌ನ ಕಿರಿಯ ಪವರ್ ಮ್ಯಾನ್ ಹುದ್ದೆಗಳ ನೇಮಕಾತಿಗೆ 2025ರ ಮೇ 16ರಂದು ಸಹನಾಶಕ್ತಿ ಪರೀಕ್ಷೆ ನಡೆಸಲಾಗಿತ್ತು. ಬಳಿಕ ವಿವಿಧ ಹಂತಗಳಲ್ಲಿ ನಡೆದ ನೇಮಕ ಪ್ರಕ್ರಿಯೆಯಲ್ಲಿ 293 ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿತ್ತು. ಈ ನಿಟ್ಟಿನಲ್ಲಿ ಶುಕ್ರವಾರ ನಡೆದ ಕೌನ್ಸಿಲಿಂಗ್‌ನಲ್ಲಿ ಅಭ್ಯರ್ಥಿಗಳ ಆಯ್ಕೆ ಅನುಸಾರವಾಗಿ ಸ್ಥಳ ನಿಯುಕ್ತಿಗೊಳಿಸಿ ಆದೇಶ ಪತ್ರವನ್ನು ವಿತರಿಸಲಾಯಿತು.
“ಸೆಸ್ಕ್ ಕುಟುಂಬಕ್ಕೆ ಸೇರುತ್ತಿರುವ ಪವರ್ ಮ್ಯಾನ್‌ಗಳು ಸೈನಿಕರಂತೆ ಶಿಸ್ತು ಮತ್ತು ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು. ಕೆಲಸ ದೊರೆತ ನಂತರ ಯಾರಿಂದಲೂ ಒತ್ತಡ ಹೇರುವ ಪ್ರಯತ್ನ ಮಾಡಬಾರದು. ಉತ್ತಮವಾಗಿ ಕರ್ತವ್ಯನಿರ್ವಹಿಸುವ ಮೂಲಕ ವೃತ್ತಿಯಲ್ಲಿ ಪ್ರಗತಿ ಸಾಧಿಸಿ, ಮುಂದುವರಿಯಬೇಕು.”
ಕೆ.ಎಂ. ಮುನಿಗೋಪಾಲ್ ರಾಜು, ವ್ಯವಸ್ಥಾಪಕ ನಿರ್ದೇಶಕರು, ಸೆಸ್ಕ್.



