ರಾಯಚೂರು : ಪ್ರಧಾನಿ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಕಾಂಗ್ರೆಸ್ ದೇಶದ ಹಿತಾಸಕ್ತಿಯನ್ನೇ ಬಲಿಕೊಡುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.
ಈ ಬಗ್ಗೆ ರಾಯಚೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಎಐ ತಂತ್ರಜ್ಞಾನ ಮತ್ತು ದೇಶದ ಯುವಶಕ್ತಿಯ ಬಗ್ಗೆ ಮಹತ್ವದ ಮಾತುಗಳನ್ನಾಡಿದರು. ಭಾರತ ಮತ್ತು ಅಮೆರಿಕದ ವಿಶ್ವವಿದ್ಯಾಲಯಗಳ ಎಐ ಶೃಂಗಸಭೆಯಲ್ಲಿ ಭಾರತವು ಇಂದು ಮೂರನೇ ಸ್ಥಾನದಲ್ಲಿದೆ ಎಂದು ಜೋಷಿ ಹೆಮ್ಮೆಯಿಂದ ತಿಳಿಸಿದರು.
ನಮ್ಮ ದೇಶದಲ್ಲಿ ಡಿಜಿಟಲ್ ತಂತ್ರಜ್ಞಾನ, ಬಲಿಷ್ಠ ವ್ಯವಸ್ಥೆಗಳು ಮತ್ತು ಚಿಪ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಗಳು ವೇಗವಾಗಿ ಬೆಳೆಯುತ್ತಿವೆ. ‘ನಮ್ಮ ದೇಶದಲ್ಲಿರುವಷ್ಟು ದೊಡ್ಡ ಪ್ರಮಾಣದ ಯುವಶಕ್ತಿ ಜಗತ್ತಿನ ಬೇರೆ ಯಾವ ದೇಶದಲ್ಲೂ ಇಲ್ಲ. ‘ಈ ಯುವಶಕ್ತಿಗೆ ಸರಿಯಾದ ಕೌಶಲ್ಯ ನೀಡಿದಾಗ, ಭಾರತ ಜಗತ್ತನ್ನೇ ಆಳಬಲ್ಲದು’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಎಐ ಬಂದರೆ ಉದ್ಯೋಗಗಳು ನಷ್ಟವಾಗುತ್ತವೆ ಎಂಬ ಕಾಂಗ್ರೆಸ್ ವಾದವನ್ನು ಜೋಶಿ ತಳ್ಳಿಹಾಕಿದ್ದು, ಈ ಹಿಂದೆ ಕಂಪ್ಯೂಟರ್ ಬಂದಾಗಲೂ ಇದೇ ರೀತಿ ಅಪಪ್ರಚಾರ ಮಾಡಲಾಗಿತ್ತು. ಆದರೆ ಕಂಪ್ಯೂಟರ್ ಬಂದ ಮೇಲೆ ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾದವು. ಎಐ ವಿಚಾರದಲ್ಲೂ ಅಷ್ಟೇ, ಎಐ ಕೆಲಸ ಮಾಡಿಸಲು ಮನುಷ್ಯನೇ ಬೇಕು. ಮನುಷ್ಯನ ಮೆದುಳು ಮತ್ತು ಕೌಶಲ್ಯ ಅಭಿವೃದ್ಧಿಯಾದಾಗ ಎಐ ಮೂಲಕ ಹೊಸ ಉದ್ಯೋಗ ಕ್ರಾಂತಿ ಸಂಭವಿಸಲಿದೆ ಎಂದು ಸ್ಪಷ್ಟಪಡಿಸಿದರು.
ಈ ನಡುವೆ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ದೇಶದ ಜನರು ಯಾವಾಗಲೂ ಬಡವರಾಗಿಯೇ ಇರಬೇಕು, ಸರ್ಕಾರದ ಮೇಲೆ ಅವಲಂಬಿತರಾಗಿರಬೇಕು ಎಂಬುದು ಕಾಂಗ್ರೆಸ್‌ನ ಮೈಂಡ್ ಸೆಟ್. ಗ್ಯಾರೆಂಟಿ-ಪಾರಂಟಿ ಹೆಸರಲ್ಲಿ ಜನರನ್ನು ಮರಳು ಮಾಡಿ ಓಟು ಪಡೆಯುವುದು ಅವರ ಗುರಿ. ಆದರೆ ಪ್ರಧಾನಿ ಮೋದಿಯವರು 2014ರಲ್ಲೇ ಹೇಳಿದಂತೆ, ನಮ್ಮ ಸರ್ಕಾರ ಬಡವರನ್ನು ಸಶಕ್ತರನ್ನಾಗಿ ಮಾಡುವತ್ತ ಗಮನಹರಿಸುತ್ತಿದೆ ಎಂದರು.
ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯ ಕುರಿತು ಮಾತನಾಡಿ, ಕೇಂದ್ರ ಸರ್ಕಾರ ನೀಡುವ ಅಕ್ಕಿಗೆ ಇವರು ತಮ್ಮ ಹೆಸರನ್ನು ಬರೆದುಕೊಳ್ಳುತ್ತಾರೆ. ತಾವು ಕೊಡಬೇಕಾದ 5 ಕೆಜಿ ಅಕ್ಕಿಯನ್ನು ಇಂದಿಗೂ ಕೊಟ್ಟಿಲ್ಲ. ಇವರು ಅತ್ಯಂತ ಅಯೋಗ್ಯರು ಎಂದು ಟೀಕಿಸಿದರು. ಜನರು ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು ಎಂಬುದು ನಮ್ಮ ಉದ್ದೇಶವಾದರೆ, ಕಾಂಗ್ರೆಸ್ ಅವರನ್ನು ಪರಾವಲಂಬಿಗಳನ್ನಾಗಿ ಮಾಡುತ್ತಿದೆ ಎಂದು ದೂರಿದರು.
ಇನ್ನೂ ಕಾಂಗ್ರೆಸ್ ಪಕ್ಷದ ಅವನತಿಗೆ ರಾಹುಲ್ ಗಾಂಧಿಯವರೇ ಕಾರಣ ಎಂದು ಗುಡುಗಿದ ಜೋಷಿ ಅವರು. ರಾಹುಲ್ ಗಾಂಧಿ ಒಬ್ಬ ಪಾರ್ಟ್ ಟೈಮ್ ಅಪ್ರಬುದ್ಧ ರಾಜಕಾರಣಿ. ಅವರ ಬುದ್ಧಿಯಿಲ್ಲದ ವರ್ತನೆಯಿಂದಲೇ ಕಾಂಗ್ರೆಸ್ ಪಾರ್ಟಿ ಹಾಳಾಗಿ ಹೋಗಿದೆ. ಎಐ ಶೃಂಗಸಭೆಯಂತಹ ದೇಶದ ಪ್ರಗತಿಯ ಕೆಲಸಗಳನ್ನು ಟೀಕಿಸುವುದು ಇವರ ಅಜ್ಞಾನಕ್ಕೆ ಹಿಡಿದ ಕೈಗನ್ನಡಿ ಎಂದು ವಾಗ್ದಾಳಿ ನಡೆಸಿದರು.



