ಮೈಸೂರು : ಕನ್ನಡ ನಾಡಿನ ಹೆಮ್ಮೆಯ ಮೈಸೂರು ಸಿಲ್ಕ್ ಸಂಸ್ಥೆಯನ್ನು ಮುಚ್ಚಲು ಮುಂದಾದರೆ ಸರ್ಕಾರದ ವಿರುದ್ದ ಬೀದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಎಚ್ಚರಿಕೆ ಕೊಟ್ಟಿದ್ದಾರೆ.
Xನಲ್ಲಿ ಪೋಸ್ಟ್ ಮಾಡಿರುವ ಅವರು, ಮೈಸೂರು ಸಿಲ್ಕ್ ಎನ್ನುವುದು ಕನ್ನಡಿಗರ ಪಾಲಿಗೆ ಕೇವಲ ಒಂದು ವಸ್ತ್ರವಲ್ಲ, ಅದು ನಮ್ಮ ಸ್ವಾಭಿಮಾನದ ಶಕ್ತಿ. ಈ ಸಂಸ್ಥೆಯನ್ನು ಉಳಿಸಲು, ನೇಕಾರರ ಹಿತ ಕಾಯಲು ಬಿಜೆಪಿ ಉಗ್ರ ಹೋರಾಟ ನಡೆಸಲಿದೆ ಎಂದು ನಾಡದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ! ಎಂಧು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಿಗರ ಆಸ್ತಿ, ಮೈಸೂರು ಮಹಾರಾಜರು ನೀಡಿದ ಕೊಡುಗೆ, ವಿಶ್ವವಿಖ್ಯಾತ `ಮೈಸೂರು ಸಿಲ್ಕ್ ’ ಇಂದು ಈ ಅಸಮರ್ಥ, ನಾಲಾಯಕ್ ಕಾಂಗ್ರೆಸ್ ಸರ್ಕಾರದ ದುರಾಡಳಿತದ ಪರಿಮಾಣವಾಗಿ ಮುಚ್ಚುವ ಪರಿಸ್ಥಿತಿ ಎದುರಾಗಿದೆ. ಮೈಸೂರು ಸಿಲ್ಕ್ ಎಂಬ ಈ ಪರಂಪರೆ ಕನ್ನಡಿಗರ ಪಾಲಿನ ಭಾವನೆ ಮಾತ್ರವಲ್ಲ, ಸಾವಿರಾರು ಕುಟುಂಬಗಳ ಬದುಕು. ಆದರೆ ಈ ನಾಡದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ಪರಂಪರೆಯ ಬೆಲೆಯೂ ಗೊತ್ತಿಲ್ಲ, ರೈತರ ನೋವೂ ಅರ್ಥವಾಗುತ್ತಿಲ್ಲ ಎಂದು ವಾಗ್ದಳಿ ನಡೆಸಿದ್ದಾರೆ.
ಮೈಸೂರು ರೇಷ್ಮೆ ನಂಬಿ ಬದುಕುತ್ತಿರುವ ಸಾವಿರಾರು ನೇಕಾರರ ಕುಟುಂಬಗಳು ಇಂದು ಆತಂಕದಲ್ಲಿವೆ.ರೇಷ್ಮೆ ಬೆಳೆಗಾರರಿಗೆ ಸಿಗಬೇಕಾದ ಪ್ರೋತ್ಸಾಹದ ಧನ ಎಲ್ಲಿ? ನೇಕಾರರ ಶ್ರಮಕ್ಕೆ ಬೆಲೆ ಎಲ್ಲಿ?ಕೆ.ಎಸ್.ಐ.ಸಿ ಸಂಸ್ಥೆಯನ್ನು ವ್ಯವಸ್ಥಿತವಾಗಿ ಹಳ್ಳ ಹಿಡಿಸುತ್ತಿರುವುದು ಯಾರ ಲಾಭಕ್ಕಾಗಿ? ಗ್ಯಾರಂಟಿ ಹೆಸರಲ್ಲಿ ಬೊಕ್ಕಸ ಖಾಲಿ ಮಾಡಿ, ಈಗ ನಮ್ಮಹೆಮ್ಮೆಯ ಸಾರ್ವಜನಿಕ ಉದ್ಯಮಗಳನ್ನು ಮಾರಾಟಕ್ಕಿಟ್ಟಿದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಮೈಸೂರು ಸಿಲ್ಕ್ ಎಂಬುದು ಕೇವಲ ಬ್ರ್ಯಾಂಡ್ ಅಲ್ಲ, ಅದು ಕನ್ನಡ ನಾಡಿನ ಮಣ್ಣಿನ ಗುಣ. ಈ ಪರಂಪರೆಯನ್ನು ಉಳಿಸುವ ಯೋಗ್ಯತೆ ನಿಮಗಿಲ್ಲದಿದ್ದರೆ, ಅಧಿಕಾರ ಬಿಟ್ಟು ತೊಲಗಿ.ಸಿಎಂ ಸಿದ್ದರಾಮಯ್ಯ ಅವರಿಗೆ ನನ್ನ ಎಚ್ಚರಿಕೆ. ನೆನಪಿರಲಿ,ನಮ್ಮ ನಾಡಿನ ಹೆಮ್ಮೆಯ ಪರಂಪರೆಯನ್ನು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಕ್ಕೆ, ಅಸಮರ್ಥತೆಗೆ ಆಹುತಿ ಕೊಡಲು ನಾವು ಬಿಡುವುದಿಲ್ಲ! ಎಂದು ಅಶೋಕ್ ಸರ್ಕಾರಕ್ಕೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.



