ಬಾಗೇಪಲ್ಲಿ : ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿರುವ ಸುಬ್ಬಾರೆಡ್ಡಿಗೆ ಆಡಳಿತ ನಡೆಸಲು ಅರ್ಹತೆ ಇಲ್ಲವೆಂದು ಕರ್ನಾಟಕ ಉಚ್ಚ ನ್ಯಾಯಾಲಯ ತೀರ್ಪು ನೀಡಿ ಶಾಸಕ ಸ್ಥಾನವನ್ನು ಅಸಿಂಧುಗೊಳಿಸಿದ್ದರೂ ನಮ್ಮ ನಾಯಕ ಸತ್ಯವಂತ ಎಂದು ಹೇಳಿಕೊಂಡು ಕ್ಷೇತ್ರದ ಜನರನ್ನು ಕಾಂಗ್ರೆಸ್ ನಾಯಕರು ಮತ್ತೆ ಮೋಸ ಮಾಡಲು ಹೊರಟಿದ್ದಾರೆಂದು ಸಿಪಿಐ(ಎಂ)ಮುಖಂಡ ಡಾ.ಅನಿಲ್ ಕುಮಾರ್ ಬೇಸರ ವ್ಯಕ್ತಪಡಿಸಿದರು.
ಬಾಗೇಪಲ್ಲಿ ಪಟ್ಟಣದ ಗೂಳೂರು ವೃತ್ತದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ವತಿಯಿಂದ ಅಯೋಜಿಸಿದ್ದ 19ನೇ ಚಿಕ್ಕಬಳ್ಳಾಪುರ ಜಿಲ್ಲಾ ರೈತ ಸಮ್ಮೇಳನವನ್ನು ಕ್ರಾಂತಿ ಗೀತೆಗಳನ್ನು ಹಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಾರಾಯಿ ಮಾರಾಟ ಹಾಗೂ ರೈತರ ಜಮೀನುಗಳನ್ನು ಖರೀದಿಸಿ ರೀಯಲ್ ಎಸ್ಟೇಟ್ ನಡೆಸುವ ಮೂಲಕ ಸಂಪಾದಿಸಿದ ಹಣ ಹಂಚಿ ಶಾಸಕರಾಗಿ ಅಯ್ಕೆಗೊಂಡವರು ಎಂದಿಗೂ ಬಡವರಿಗೆ, ಕೃಷಿಕರಿಗೆ, ಕೂಲಿ ಕಾರ್ಮಿಕರಿಗೆ ನ್ಯಾಯ ಓದಗಿಸಲು ಸಾಧ್ಯವಿಲ್ಲ.
ಚುನಾವಣೆ ಸಮಯದಲ್ಲಿ ಹಾಕಿರುವ ಬಂಡವಾಳವನ್ನು ವಾಪಸ್ಸು ಪಡೆಯಲು ಭ್ರಷ್ಟಾಚಾರದ ಆಡಳಿತ ನಡೆಸಿರುವ ಸುಬ್ಬಾರೆಡ್ಡಿಯ ಭ್ರಷ್ಟಾಚಾರ ದಾಖಲೆ ಸಮೇತ ಕರ್ನಾಟಕ ಹೈ ಕೋರ್ಟ್ನಲ್ಲಿ ಸಾಬೀತಾಗಿದೆ ಎಂದು ದೂರಿದರು.
ಅಲ್ಲದೆ ಕ್ಷೇತ್ರದ ಮತದಾರರಿಗೆ ಹಣ, ಅಮಿಷವೊಡ್ಡಿ ಅಡ್ಡದಾರಿಯಲ್ಲಿ ಅಧಿಕಾರಕ್ಕೆ ಬರಲು ಮುಂದಾಗುತ್ತಿರುವ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳಿಗೆ ಜನಪರ ಆಡಳಿತ ನಡೆಸುವ ಆರ್ಹತೆ ಇಲ್ಲ ಎಂಬುದು ಬಾಗೇಪಲ್ಲಿ ಕ್ಷೇತ್ರದ ಜನ ಈಗಲಾದರೂ ತಿಳಿದುಕೊಂಡು ಎಚ್ಚೆತ್ತುಕೊಳ್ಳದಿದ್ದರೆ ಈ ಕ್ಷೇತ್ರಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ(ಎಂ)ಪಕ್ಷದ ಅಭ್ಯರ್ಥಿ ಹಾಗೂ ಮುಖಂಡರು ಕಾಂಗ್ರೆಸ್ ಪಕ್ಷದವರಿಗೆ ಮಾರಾಟ ಆಗಿದ್ದಾರೆ ಎಂದು ಬೊಬ್ಬೆ ಹೊಡೆಯುತ್ತಿರುವ ವಲಸೆ ಕಾಂಗ್ರೆಸ್ ಮುಖಂಡರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕಾಗಿದೆ. ಬಡವರ, ಶೋಷಿತರ ಹಕ್ಕುಗಳಿಗಾಗಿ ನಿರಂತರ ಹೋರಾಟ ಮಾಡುತ್ತಿರುವ ಕೆಂಬಾವುಟವನ್ನು ಯಾರು ಖರೀದಿ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ನಂತರ ಕೆಪಿಆರ್‌ಎಸ್ ತಾಲೂಕು ಅಧ್ಯಕ್ಷ ಡಿ.ಸಿ.ಶ್ರೀನಿವಾಸ್ ಮಾತನಾಡಿ, ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸಿ ಕುಡಿಯಲು ಶುದ್ದ ನೀರು ಕೊಡಿ ಎಂದು ಬಯಲುಸೀಮೆ ಜಿಲ್ಲೆಯ ಜನತೆ ಸರ್ಕಾರಕ್ಕೆ ಮನವಿ ಮಾಡಿದರೆ ಕ್ಷೇತ್ರದ ಶಾಸಕರು, ಜಿಲ್ಲೆಯ ಸಚಿವರು ಬೆಂಗಳೂರಿನ ಚರಂಡಿಗಳಲ್ಲಿ ಹರಿಯುವ ಕಲುಷಿತ ಕೊಚ್ಚೆ ನೀರನ್ನು ಈ ಭಾಗದ ಕೆರೆಗಳಿಗೆ ಹರಿಸಿ ಜನರ ಆರೋಗ್ಯದೊಂದಿಗೆ ಚಲ್ಲಾಟ ಆಡುತ್ತಿದ್ದಾರೆ. ಕೆರೆಗಳಿಗೆ ಹರಿಸಿರುವ ಕೊಚ್ಚೆ ನೀರಿನಲ್ಲಿ ಮುಳುಗಿ ಮೂರು ಜನ ಅಮಾಯಕ ಮಕ್ಕಳು ಉಸಿಗಟ್ಟಿ ಮೃತಪಟ್ಟಿದ್ದರೂ ನಾಯಕರಿಗೆ ನಾಚೀಕೆ ಆಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಹಕ್ಕು ಪತ್ರದಂತೆ, ಸಾಗುವಳಿ ಚೀಟಿಯಂತೆ ಭೂಮಿ ವರ್ಗಾವಣೆ ಮಾಡಲು ಕಂದಾಯ ಇಲಾಖೆಯಲ್ಲಿ ಲಂಚ ಪಿಕ್ಸ್ ಮಾಡಿ ವ್ಯಾಪಕ ಭ್ರಷ್ಟಾಚಾರ ನಡೆಸಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ರಸ್ತೆ, ಚರಂಡಿ, ವಿದ್ಯುತ್ ಇಲ್ಲದ ಕಲ್ಲುಬಂಡೆಗಳ ಗುಡ್ಡಾಗಾಡು ಜಮೀನಿಗೆ ಹಕ್ಕುಪತ್ರ ಕೊಟ್ಟು ಜನರಿಗೆ ಉಚಿತ ನಿವೇಶನ ನೀಡಿದ್ದೇವೆಂದು ಮಾಧ್ಯಮಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಜನರಿಗೆ ಸುಳ್ಳು ಭರವಸೆಗಳು ನೀಡಿ ಭ್ರಷ್ಟ ಆಡಳಿತ ನೀಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರದ ದರ್ಪದಿಂದ ಮೆರೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಯು.ಬಸವರಾಜು, ಚನ್ನರಾಯಪ್ಪ, ಸೂರ್ಯ ನಾರಾಯಣ, ಎಂ.ಪಿ.ಮುನಿ ವೆಂಕಟಪ್ಪ, ರಘುರಾಮರೆಡ್ಡಿ, ಬೈರಾರೆಡ್ಡಿ, ವೆಂಕಟರಾಜು, ಆದಿನಾರಾಯಣ, ನಾರಾಯಣಸ್ವಾಮಿ, ಮುನಿಕೃಷ್ಣ, ಲಕ್ಷ್ಮಿನಾರಾಯಣರೆಡ್ಡಿ, ಉತ್ತನ್ನ, ಕೆ.ನಾಗರಾಜು, ವಾಲ್ಮೀಕಿ ಅಶ್ವತ್ಥಪ್ಪ, ಮುಸ್ತಫಾ, ಜಿ.ಕೃಷ್ಣಪ್ಪ, ಕೆ.ಮುನಿಯಪ್ಪ, ಮಂಜುನಾಥ, ಓಬಳರಾಜು ಮತ್ತಿತರರು ಇದ್ದರು.



