Monday, March 2, 2026
Google search engine

Homeಸ್ಥಳೀಯಮದ್ದೂರು ನಗರಸಭೆ ವಿಸ್ತರಣೆ ವಿರುದ್ಧ ಪ್ರತಿಭಟನೆ : ಗ್ರಾಮಸ್ಥರ ಹೋರಾಟಕ್ಕೆ ಹೆಚ್.ಡಿ. ಕುಮಾರಸ್ವಾಮಿ ಬೆಂಬಲ

ಮದ್ದೂರು ನಗರಸಭೆ ವಿಸ್ತರಣೆ ವಿರುದ್ಧ ಪ್ರತಿಭಟನೆ : ಗ್ರಾಮಸ್ಥರ ಹೋರಾಟಕ್ಕೆ ಹೆಚ್.ಡಿ. ಕುಮಾರಸ್ವಾಮಿ ಬೆಂಬಲ

ಮಂಡ್ಯ : ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ, ಸೋಮನಹಳ್ಳಿ ಸೇರಿದಂತೆ ವಿವಿಧ ಪ್ರದೇಶಗಳನ್ನ ಸ್ಥಳೀಯರ ಆಶಯಗಳಿಗೆ ವಿರುದ್ಧವಾಗಿ ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರಿಸಲಾಗಿದೆ. ಕೂಡಲೇ ರಾಜ್ಯ ಸರ್ಕಾರ ಈ ನಿರ್ಧಾರ ಕೈಬಿಡಬೇಕು ಎಂದು ಮಂಡ್ಯದ ಲೋಕಸಭೆ ಸದಸ್ಯರೂ ಆಗಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಆಗ್ರಹಿಸಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಕೇಂದ್ರ ಸಚಿವರು, ಜನಾಭಿಪ್ರಾಯ ಪರಿಗಣಿಸದೇ ಏಕಪಕ್ಷೀಯವಾಗಿ ಸಂಪುಟ ಸಭೆಯಲ್ಲಿ ಕೂಡ ಈ ಪಂಚಾಯಿತಿಗಳನ್ನ ಮದ್ದೂರು ನಗರಸಭೆಗೆ ಸೇರಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೇಳಿದ್ದೇನೆ. ಸರಕಾರ ಜನತೆಯ ನಿಲುವುಗಳಿಗೆ ವಿರುದ್ಧವಾಗಿ ಹೋಗಬಾರದು. ಈ ಹಿನ್ನೆಲೆಯಲ್ಲಿ ತಾವು ಮಧ್ಯಪ್ರವೇಶ ಮಾಡಿ ಇದಕ್ಕೆ ತಡೆಯೊಡ್ಡಬೇಕು ಎಂದು ಕೋರಿದ್ದಾರೆ.

ಈ ಎಲ್ಲಾ ಪಂಚಾಯಿತಿಗಳ ಗ್ರಾಮಸ್ಥರು ಹಾಗೂ ಪಂಚಾಯಿತಿಗಳ ಸದಸ್ಯರು, ರೈತ ಮುಖಂಡರಾದ ಸುನಂದಾ ಜಯರಾಂ ಅವರು ಸೇರಿದಂತೆ ಅನೇಕರು ಈ ಬಗ್ಗೆ ಮನವಿ ಮಾಡಿದ್ದು, ಇವರೆಲ್ಲರೂ 70 ದಿನಗಳಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದು, ನಾನು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಅವರ ಬೇಡಿಕೆಗಳನ್ನು ಆಲಿಸಿದ್ದೇನೆ ಎಂದು ಕೇಂದ್ರ ಸಚಿವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ, ಈ ಬಗ್ಗೆ ಸುನಂದಾ ಜಯರಾಮ್ ಅವರು ತಮಗೆ ನೀಡಿದ್ದ ಮನವಿ ಪತ್ರವನ್ನು ಲಗತ್ತಿಸಿದ್ದಾರೆ.

ಯಾವುದೇ ಕಾರಣಕ್ಕೂ ಮದ್ದೂರು ನಗರಸಭೆ ವ್ಯಾಪ್ತಿಗೆ ಈ ಗ್ರಾಮಗಳನ್ನು ಸೇರಿಸಬಾರದು. ಕೂಡಲೇ ಈ ಜನವಿರೋಧಿ ನಿರ್ಧಾರವನ್ನ ಹಿಂಪಡೆಯಬೇಕೆಂದು ಒಕ್ಕೂರಲ ಒತ್ತಾಯ ಮಾಡಿರುತ್ತಾರೆ. ಸ್ಥಳೀಯರ ಮನವಿಗೆ ಮನ್ನಣೆ ನೀಡುವುದು ಸೂಕ್ತ ಎಂಬುದು ನನ್ನ ಅಭಿಪ್ರಾಯವಾಗಿದೆ. ಅಲ್ಲದೆ, ಜನತೆಯ ನಿರ್ಧಾರಕ್ಕೆ ವಿರುದ್ಧವಾಗಿ ಸರಕಾರ ನಡೆದುಕೊಳ್ಳುವುದು ಸರಿಯಲ್ಲ ಎಂದು ಸಚಿವರು ಮುಖ್ಯಮಂತ್ರಿಗಳನ್ನ ಒತ್ತಾಯಿಸಿದ್ದಾರೆ.

ಈ ಭಾಗದ ಎಲ್ಲಾ ಗ್ರಾಮಗಳು ಕೃಷಿ ಆಧರಿತವಾಗಿದ್ದು, ಸುಮಾರು 2,000 ಎಕರೆಗೂ ಹೆಚ್ಚು ಭೂಮಿ ನೀರಾವರಿ ಪ್ರದೇಶವಾಗಿರುತ್ತದೆ ಎಂಬುದು ಗಮನಾರ್ಹ. ಭತ್ತ, ಕಬ್ಬು, ಹೂವು, ತರಕಾರಿ ಇನ್ನಿತರ ಬೆಳೆಗಳನ್ನು ಸಮೃದ್ಧವಾಗಿ ಬೆಳೆಯಲಾಗುತ್ತಿದೆ. ಹೈನುಗಾರಿಕೆ, ಪಶು ಸಾಕಾಣಿಕೆಯಲ್ಲಿ ರೈತಾಪಿ ಜನ ತೊಡಗಿಕೊಂಡಿದ್ದಾರೆ. ಜತೆಗೆ ಗೆಜ್ಜಲಗೆರೆ ಗ್ರಾಮದಲ್ಲಿಯೇ ಮಂಡ್ಯ ಜಿಲ್ಲೆಯ ಹಾಲು ಉತ್ಪಾದನಾ ಮಂಡಳಿ (ಮನ್ ಮುಲ್) ಕಾರ್ಯ ನಿರ್ವಹಿಸುತ್ತಿದೆ. ಸರಕಾರಿ ಆಸ್ಪತ್ರೆ, ವಿದ್ಯಾಸಂಸ್ಥೆಗಳು ಸೇರಿ ಅನೇಕ ಮೂಲಸೌಕರ್ಯ ಸೇವೆಗಳು ಜನರಿಗೆ ಲಭ್ಯವಿವೆ ಎಂಬ ಅಂಶವನ್ನು ಸಚಿವರು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದಾರೆ.

ಯಾವುದೇ ಮುನ್ಸೂಚನೆ ನೀಡದೇ ಸಾರ್ವಜನಿಕರ, ರೈತರ ಅಭಿಪ್ರಾಯವನ್ನು ಆಲಿಸಿದೇ, ಗ್ರಾಮಸಭೆಯನ್ನು ನಡೆಸದೆ ಸದರಿ ಗ್ರಾಮಗಳನ್ನ ಮದ್ದೂರು ನಗರಸಭೆಗೆ ಸೇರ್ಪಡೆ ಮಾಡುವ ನಿರ್ಣಯ ಮಾಡಿರುವುದು ಜನವಿರೋಧಿ ಕ್ರಮವಾಗಿದೆ. ಬಹುಮತವನ್ನು ಲೆಕ್ಕಿಸದೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಕೆಲವರಷ್ಟೇ ಸದಸ್ಯರು ಗ್ರಾಮಸಭೆಯಲ್ಲಿ ಏಕಪಕ್ಷೀಯ ನಿರ್ಣಯ ಕೈಗೊಂಡು ಗ್ರಾಮ ಪಂಚಾಯಿತಿ ಕಾಯ್ದೆಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. ಅಲ್ಲದೆ, ಈ ಜನವಿರೋಧಿ ನಿರ್ಣಯದ ಬಗ್ಗೆ ಗ್ರಾಮಗಳ ಗ್ರಾಮಸ್ಥರು, ರೈತರು ಹಾಗೂ ಎಲ್ಲಾ ಸಾರ್ವಜನಿಕರು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡಿರುವುದಾಗಿ ತಿಳಿದುಬಂದಿದೆ ಎಂದು ಸಚಿವರು ಪತ್ರದಲ್ಲಿ ಹೇಳಿದ್ದಾರೆ.

ಈ ಹಿನ್ನೆಲೆಯಲ್ಲಿ ಜನತೆಯ ಹಿತದೃಷ್ಟಿಯಿಂದ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಮತ್ತು ಸೋಮನಹಳ್ಳಿ ಗ್ರಾಮಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರಿಸಿರುವ ನಿರ್ಣಯವನ್ನು ಕೂಡಲೇ ವಾಪಸ್ ಪಡೆಯಬೇಕು. ತಾವು ಸ್ಥಳೀಯರ ಮನವಿಗೆ ಓಗೊಟ್ಟು ಅವರ ಪರವಾಗಿ ನಿರ್ಧಾರ ಕೈಗೊಳ್ಳುತ್ತೀರಿ ಎಂದು ಆಶಿಸುತ್ತೇನೆ ಎಂದು ಸಚಿವರು ಪತ್ರದಲ್ಲಿ ಕೋರಿದ್ದಾರೆ.

RELATED ARTICLES
- Advertisment -
Google search engine

Most Popular