ಬೆಂಗಳೂರು : ಇಂದು ಸಾಮಾಜಿಕ ಬೆಸುಗೆಯನ್ನು ಕತ್ತರಿಸುವ ಕತ್ತರಿಗಳು ಜನಸಮುದಾಯದ ಪ್ರಜ್ಞೆಯನ್ನು ರೂಪಿಸುತ್ತಿವೆ. ಇಂಥಾ ಹೊತ್ತಲ್ಲಿ ಸಮಾಜವನ್ನು ಪರಸ್ಪರ ಹೊಲಿಯುವ ಸೂಜಿಗಳ ಅಗತ್ಯವಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅಭಿಪ್ರಾಯಪಟ್ಟರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವ ವಿದ್ಯಾನಿಲಯ ಮತ್ತು ಬೆಂಗಳೂರು ವಿಶ್ವ ವಿದ್ಯಾನಿಲಯ ಆಯೋಜಿಸಿದ್ದ ಮಾಧ್ಯಮ ಹಬ್ಬ-೨೦೨೬ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅರಳುವ ಹೂವಿನ ಒಳಗೆ ಮಕರಂದ ಬೆರೆತಿರುವ ಹಾಗೆ ಅರಳುವ ಪತ್ರಕರ್ತ, ಪತ್ರಕರ್ತೆಯ ಒಳಗೆ ಸಾಮಾಜಿಕ ಪ್ರಜ್ಞೆ ಮತ್ತು ನೈತಿಕ ಪ್ರಜ್ಞೆ ಬೆರೆತಿರಬೇಕು ಎಂದರು.
ಮುಂದುವರೆದು, ಜನ ಸಮುದಾಯದ ಪ್ರಜ್ಞೆಯನ್ನು ರೂಪಿಸುವುದು ಪತ್ರಕರ್ತರಾದವರ ಹೊಣೆ. ಜನ ಸಮುದಾಯದ, ಸಮಾಜದ ಪ್ರಜ್ಞೆಯನ್ನು ರೂಪಿಸುವ ನಿಮ್ಮ ಪ್ರಜ್ಞೆಯನ್ನು ಯಾರು ರೂಪಿಸುತ್ತಿದ್ದಾರೆ, ಯಾವುದು ರೂಪಿಸುತ್ತಿದೆ ಎನ್ನುವ ಸ್ಪಷ್ಟ ಎಚ್ಚರ ಇರಬೇಕಾಗುತ್ತದೆ. ಈ ಎಚ್ಚರ ಇದ್ದಾಗ ತಾನು ಬರೆದ ಪ್ರತಿ ವರದಿ, ತಾನು ತೋರಿಸಿದ ಪ್ರತಿ ಸುದ್ಧಿ, ಕ್ಯಾಮೆರಾ ಮುಂದೆ ತಾನು ಆಡಿದ ಪ್ರತಿ ಮಾತಿಗೂ ಉತ್ತರದಾಯಿತ್ವ ಹೊಂದಿರುವ ಹೊಣೆಗಾರಿ ಪತ್ರಕರ್ತರು ರೂಪುಗೊಳ್ಳುತ್ತಾರೆ ಎಂದರು.
ಪತ್ರಕರ್ತರಾಗುವವರು ಪೂರ್ವಗ್ರಹ ಮುಕ್ತ ಮಗುವಿನ ಮನಸ್ಸಿನಿಂದ ಸಾಮಾಜಿಕ ವ್ಯವಸ್ಥೆಯನ್ನು, ಸಾಮಾಜಿಕ ತಾರತಮ್ಯಗಳನ್ನು ಇರುವುದನ್ನು ಇರುವ ಹಾಗೆ ಗಮನಿಸಬೇಕು. ಹೀಗಾದಾಗ ಮಾತ್ರ ಸಾಮಾಜಿಕ ಸಮಸ್ಯೆಗಳು ಮತ್ತು ಈ ಸಮಸ್ಯೆಗಳಿಗೆ ಕಾರಣವಾದ ಸಂಗತಿಗಳ ಬಗ್ಗೆ ಸ್ಪಷ್ಟ ಗ್ರಹಿಕೆ ಬರುತ್ತದೆ. ಈ ಸ್ಪಷ್ಟತೆಯೇ ಪರಿಣಾಮಕಾರಿ ಪತ್ರಕರ್ತನನ್ನು ರೂಪಿಸುತ್ತದೆ ಎಂದು ವಿವರಿಸಿದರು.
ವೇದಿಕೆ ಮೇಲಿರುವ ದಿನೇಶ್ ಅಮೀನ್ ಮಟ್ಟು ಅವರು ಸೇರಿದಂತೆ ವಡ್ಡರ್ಸೆ ರಘುರಾಮ್ ಶೆಟ್ಟರು, ಪಿ.ಲಂಕೇಶ್, ಖಾದ್ರಿ ಶಾಮಣ್ಣ, ವೈಎನ್ ಕೆ, ಮೊಹರೆ ಹನುಮಂತರಾಯರು, ಡಿವಿಜಿ, ಟಿಎಸ್ಆರ್ ರೀತಿಯ ಹಲವು ಹಿರಿಯರು ಸೂಜಿಗಳಾಗಿ, ದರ್ಜಿಗಳಾಗಿ, ನೇಕಾರರಾಗಿ ಪತ್ರಿಕಾ ವೃತ್ತಿಯ ಪ್ರಜ್ಞೆಯನ್ನು ರೂಪಿಸುವುದರ ಜೊತೆಗೆ ಸಾಮಾಜಿಕ ಪ್ರಜ್ಞೆಯನ್ನೂ ರೂಪಿಸಿದ್ದಾರೆ. ಸಮಾಜವನ್ನು ಬೆಸೆಯುವ ಬೆಸುಗೆಗಳಾಗಿದ್ದಾರೆ ಎಂದು ಎಲ್ಲರಿಗೂ ಧನ್ಯತೆ ಅರ್ಪಿಸಿದರು.
ಅಲ್ಲದೆ ಕೇವಲ ಕಾರ್ಯಾಗಾರದಲ್ಲಿ ಭಾಗವಹಿಸುವುದರಿಂದ ಪತ್ರಿಕೋದ್ಯಮದ ಪಟ್ಟುಗಳನ್ನು ಕಲಿಯಲು ಸಾಧ್ಯವಿಲ್ಲ ಎಂಬುದರ ಬಗ್ಗೆಯೂ ವಿದ್ಯಾರ್ಥಿಗಳು ಸ್ಪಷ್ಡವಾಗಿ ತಿಳಿಯಬೇಕಿದೆ. ಓದು, ಸಂಘಟನೆ ಹಾಗೂ ಸ್ವತಂತ್ರ ಚಿಂತನೆಯಿಂದ ಮಾತ್ರ ಒಳನೋಟಗಳನ್ನು ಪಡೆಯಬಹುದು. ಒಳನೋಟವೇ ಇಲ್ಲದವರಿಗೆ ಪತ್ರಿಕೋದ್ಯಮ ಕೈಹಿಡಿಯದು. ಹಾಗಾಗಿ ಈ ಒಳನೋಟಗಳನ್ನು ಬೆಳೆಸಿಕೊಳ್ಳಲು ವಿದ್ಯಾರ್ಥಿಗಳು ತಮ್ಮ ಒಳಗಣ್ಣುಗಳನ್ನು ತೆರೆದು ತಯಾರಿ ನಡೆಸಿಕೊಳ್ಳಬೇಕಿದೆ ಎಂದರಲ್ಲದೆ, ಮಹಾತ್ಮಗಾಂಧಿ ಮತ್ತು ಅಂಬೇಡ್ಕರ್ ಕೂಡ ಪತ್ರಕರ್ತರಾಗಿದ್ದವರು. ಇವರೆಲ್ಲಾ ಪತ್ರಕರ್ತರಾಗಿದ್ದಾಗ ಪತ್ರಿಕೋದ್ಯಮಕ್ಕೆ ಹಣದ ಬಡತನವಿತ್ತು. ಸತ್ಯಕ್ಕೆ ಬಡತನ ಇರಲಿಲ್ಲ. ಈಗ ಹಣದ ಬಡತನದಿಂದ ಹೊರಗೆ ಬಂದಿರುವ ಪತ್ರಿಕೋದ್ಯಮ ಸತ್ಯದ ಬಡತನಕ್ಕೆ ಜಾರಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, ಕುಲಪತಿ ಪ್ರೊ.ರಮೇಶ್ ಬಿ, ಕುಲಸಚಿವ ನೀವೀನ್ ಜೋಸೆಫ್, ವಾರ್ತಾ ಇಲಾಖೆ ಉಪನಿರ್ದೇಶಕರಾದ ಪಲ್ಲವಿ ಹೊನ್ನಾಪುರ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.



