Monday, July 13, 2026
Google search engine

Homeರಾಜ್ಯರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಭಾಗಿ : ಫೋಟೋ ವೈರಲ್

ರೌಡಿಶೀಟರ್ ಬರ್ತ್‌ಡೇ ಪಾರ್ಟಿಯಲ್ಲಿ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಭಾಗಿ : ಫೋಟೋ ವೈರಲ್

ಬೆಂಗಳೂರು : ಯಲಹಂಕ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಕುಖ್ಯಾತ ರೌಡಿಶೀಟರ್‌ ಒಬ್ಬನ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗವಹಿಸಿರುವ ಫೋಟೋ ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.

ಯಲಹಂಕದ ಆಲೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರು ರೌಡಿಶೀಟರ್‌ಗೆ ಕೇಕ್ ತಿನ್ನಿಸಿ ಶುಭಾಶಯ ಕೋರಿರುವ ದೃಶ್ಯಗಳು ಗಮನ ಸೆಳೆದಿವೆ. ಚಿಕ್ಕಜಾಲ ಪೊಲೀಸ್ ಠಾಣೆಯ ರೌಡಿಶೀಟರ್ ಪಟ್ಟಿಯಲ್ಲಿರುವ ದಾಸ ಅಲಿಯಾಸ್ ‘ಕಿಂಗ್ ಮೇಕರ್ ದಾಸ’ನ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಶಾಸಕ ವಿಶ್ವನಾಥ್ ಭಾಗಿಯಾಗಿದ್ದರು ಎನ್ನಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ದಾಸ ವಿರುದ್ಧ ಯಲಹಂಕ, ದಾಸರಹಳ್ಳಿ ಹಾಗೂ ನೆಲಮಂಗಲ ಭಾಗಗಳಲ್ಲಿ ಭೂ ಕಬಳಿಕೆ ಮತ್ತು ಅಕ್ರಮ ರಿಯಲ್ ಎಸ್ಟೇಟ್ ವ್ಯವಹಾರಗಳಿಗೆ ಸಂಬಂಧಿಸಿದ ಹಲವು ಆರೋಪಗಳಿದ್ದು, ಈ ಹಿಂದೆ ಇದೇ ರೌಡಿಶೀಟರ್‌ನ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ನಾಗರಾಜ್ ಭಾಗವಹಿಸಿದ್ದ ಪ್ರಕರಣವೂ ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಬಳಿಕ ಇಲಾಖೆಯು ಅವರನ್ನು ಅಮಾನತುಗೊಳಿಸಿತ್ತು. ಇದೀಗ ಅದೇ ವ್ಯಕ್ತಿಯ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಯೊಬ್ಬರು ಕಾಣಿಸಿಕೊಂಡಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.

ಇನ್ನೊಂದೆಡೆ, ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಕುರಿತು ಶಾಸಕ ವಿಶ್ವನಾಥ್ ನೀಡಿರುವ ಹೇಳಿಕೆಯೂ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಸದಾನಂದ ಗೌಡರು ಒಕ್ಕಲಿಗರಲ್ಲ ಎಂಬ ಅವರ ಹೇಳಿಕೆಯನ್ನು ಖಂಡಿಸಿ ಯಲಹಂಕ ತಾಲ್ಲೂಕು ಒಕ್ಕಲಿಗರ ಸಂಘದ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

ಯಲಹಂಕ ಉಪನಗರದಲ್ಲಿರುವ ಒಕ್ಕಲಿಗರ ಸಂಘದ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಶಾಸಕ ವಿಶ್ವನಾಥ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸಂಘದ ಮುಖಂಡರಾದ ಕೃಷ್ಣಪ್ಪ, ಚಂದ್ರಪ್ಪ ಹಾಗೂ ಸತೀಶ್ ಕಡತನಮಲೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ, ಶಾಸಕರು ತಮ್ಮ ಹೇಳಿಕೆಗೆ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಲಾಯಿತು.

RELATED ARTICLES
- Advertisment -
Google search engine

Most Popular