ಮೈಸೂರು : ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ರಾಜಕಾರಣಕ್ಕೆ ಕಾಲಿಟ್ಟು 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ‘ಚಿತ್ರದುರ್ಗದಲ್ಲಿ ಮೇ 9ರಂದು ‘ಬಿಎಸ್‌ವೈ ಅಭಿಮಾನೋತ್ಸವ’ ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಬಿಎಸ್ ವೈ ಅಭಿಮಾನೋತ್ಸವದಿಂದ ರಾಜಕೀಯ ಲಾಭ ಪಡೆಯುವ ಆಸೆ ನನಗೂ ಇಲ್ಲ, ಪಕ್ಷಕ್ಕೂ ಇಲ್ಲ’ ಎಂದು ಹೇಳಿದ್ದಾರೆ.
ಮೈಸೂರಿನ ಸುತ್ತೂರು ಶಾಖಾ ಮಠದಲ್ಲಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ಭೇಟಿಯಾದ ಬಿವೈ ವಿಜಯೇಂದ್ರ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕೆಲವರು ಅದೃಷ್ಟದಿಂದ ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ಬಿ.ಎಸ್. ಯಡಿಯೂರಪ್ಪ ಅವರು ಅದೃಷ್ಟದಿಂದ ಮುಖ್ಯಮಂತ್ರಿ ಆದವರಲ್ಲ. ಸತತ ಹೋರಾಟದಿಂದ ಆ ಸ್ಥಾನ ಗಳಿಸಿದವರು. 50 ವರ್ಷಗಳ ರಾಜಕಾರಣದಲ್ಲಿ 45 ವರ್ಷ ಹೋರಾಟವನ್ನೇ ಮಾಡಿದ್ದಾರೆ. ಇದನ್ನು ಸ್ಮರಿಸುವ ಕಾರಣದಿಂದ ನಾವು ಸಮಾವೇಶ ನಡೆಸುತ್ತಿದ್ದೇವೆ’ ಎಂದರು.
ಕಾರ್ಯಕ್ರಮದಲ್ಲಿ ರಾಜಕಾರಣಿಗಳು ರಾಜ್ಯದ ಬಹುತೇಕ ಮಠಾಧೀಶರೂ ಭಾಗವಹಿಸುತ್ತಾರೆ. ಸಮಾವೇಶದ ಸಂದೇಶ ಏನೆಂಬುದು ಅದು ಮುಗಿದ ಬಳಿಕ ಗೊತ್ತಾಗಲಿದೆ ಎಂದು ಬಿವೈ ವಿಜಯೇಂದ್ರ ತಿಳಿಸಿದರು.



