ರಾಯ್ಪುರ್: ಇತ್ತೀಚಿಗಷ್ಟೇ ಈ ಕಲ್ಲಂಗಡಿ ಹಣ್ಣು ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರು . ಇದೀಗ ಮತ್ತೆ ಕಲ್ಲಂಗಡಿ ಸೇವಿಸಿ 15 ವರ್ಷದ ಬಾಲಕ ಮೃತಪಟ್ಟಿದ್ದು, ಇತರ ಮೂವರು ಅಸ್ವಸ್ಥರಾಗಿರುವ ಘಟನೆ ಛತ್ತೀಸ್‌ಗಢದ ಜಂಜ್‌ಗೀರ್-ಚಂಪಾ ಜಿಲ್ಲೆಯ ಘುರ್ಕೋಟ್ ಗ್ರಾಮದಲ್ಲಿ ನಡೆದಿದೆ.
ಮಕ್ಕಳು, ಸಂಬಂಧಿಕರೊಂದಿಗೆ ತಮ್ಮ ಮಾವನ ಮನೆಗೆ ಬಂದಿದ್ದರು. ಈ ವೇಳೆ ಮನೆಯಲ್ಲೇ ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದಾಋಎ ಬಳಿಕ ಮಕ್ಕಳು ಅಸ್ವಸ್ಥಗೊಂಡಿದ್ದಾರೆ.ಅದರಲ್ಲಿ ಒಬ್ಬ ಬಾಲಕ ಮೃತಪಟ್ಟಿದ್ದಾನೆ.
ಮೃತನನ್ನು ಪೋಡಿ ದಲ್ಹಾ ಗ್ರಾಮದ ನಿವಾಸಿ ಅಖಿಲೇಶ್ ಧಿವರ್ (15) ಎಂದು ಗುರುತಿಸಲಾಗಿದ್ದು, ಅವರಿಡ್ ಗ್ರಾಮದ ಧಿವರ್ (4), ಖಟೋಲಾದಿಂದ ಪಿಂಟು ಧಿವರ್ (12) ಮತ್ತು ಕೊಟ್‌ಗಢದ ಹಿತೇಶ್ ಧಿವರ್ (13) ಅಸ್ವಸ್ಥಗೊಂಡ ಮಕ್ಕಳು. ಪ್ರಾಥಮಿಕ ಮಾಹಿತಿಯ ಪ್ರಕಾರ, ಭಾನುವಾರ (ಮೇ 10) ಸಂಜೆ ಮಕ್ಕಳು ಮನೆಯಲ್ಲಿ ಇಟ್ಟಿದ್ದ ಕತ್ತರಿಸಿದ ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದಾರೆ. ಕೆಲವು ಗಂಟೆಗಳ ನಂತರ, ಅಖಿಲೇಶ್‍ಗೆ ವಾಂತಿ, ಅತಿಸಾರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿತು. ನಂತರ ಇತರ ಮೂವರು ಮಕ್ಕಳಲ್ಲಿಯೂ ಇದೇ ರೀತಿಯ ಲಕ್ಷಣಗಳು ಕಂಡುಬಂದವು.
ಮಕ್ಕಳ ಸ್ಥಿತಿ ಹದಗೆಟ್ಟಿದ್ದರಿಂದ, ಕುಟುಂಬ ಸದಸ್ಯರು ಸೋಮವಾರ (ಮೇ 11) ಆಂಬ್ಯುಲೆನ್ಸ್‌ಗಳಲ್ಲಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಬಾಲಕ ಅಖಿಲೇಶ್ ಆಸ್ಪತ್ರೆಗೆ ಬರುವಷ್ಟರಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ದೃಡಪಡಿಸಿದರು. ಇತರ ಮೂವರು ಮಕ್ಕಳನ್ನು ಇಲ್ಲಿನ ತುರ್ತು ಚಿಕಿತ್ಸಾ ವಾರ್ಡ್‌ಗೆ ದಾಖಲಿಸಲಾಗಿದೆ.
ಕಲ್ಲಂಗಡಿ ಹಣ್ಣನ್ನು ಬೆಳಿಗ್ಗೆ ಕತ್ತರಿಸಿ ಹಲವಾರು ಗಂಟೆಗಳ ನಂತರ ಸೇವಿಸಲಾಗಿದೆ ಎಂದು ವರದಿಯಾಗಿದೆ. ಇದು ಮಾಲಿನ್ಯ ಉಂಟಾಗಿರುವ ಸಾಧ್ಯತೆಯನ್ನು ಹೆಚ್ಚಿಸಿದೆ ಎಂದು ಡಾ. ಕುಜೂರ್ ಹೇಳಿದರು. ಕಲುಷಿತ ಕಲ್ಲಂಗಡಿ ಸೇವನೆಯಿಂದಾಗಿ ಮಕ್ಕಳು ತಿಂದ ಹಣ್ಣು ವಿಷವಾಗಿ ಬದಲಾಗಿರಬಹುದು ಎನ್ನಲಾಗಿದೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಒಳಾಂಗಗಳ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಸಂರಕ್ಷಿಸಲಾಗಿದೆ. ಮನೆಯಲ್ಲಿ ಇರಿಸಲಾದ ಮತ್ತೊಂದು ಕಲ್ಲಂಗಡಿ ಹಣ್ಣನ್ನು ಪ್ರಯೋಗಾಲಯ ಪರೀಕ್ಷೆಗಾಗಿ ಆಹಾರ ಸುರಕ್ಷತಾ ಇಲಾಖೆಗೆ ಕಳುಹಿಸಲಾಗಿದೆ ಎಂದು ಕುಜೂರ್ ಹೇಳಿದರು.
ವಿಧಿವಿಜ್ಞಾನ ಮತ್ತು ಆಹಾರ ಸುರಕ್ಷತಾ ವರದಿಗಳು ಬಂದ ನಂತರವೇ ಸಾವು ಮತ್ತು ಅನಾರೋಗ್ಯಕ್ಕೆ ನಿಖರವಾದ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



