Wednesday, July 1, 2026
Google search engine

Homeರಾಜ್ಯಸತ್ಯಾಂಶ ಪರಿಶೀಲಿಸಿ ಸುದ್ದಿ ಪ್ರಸಾರ ಮಾಡಿ; ಫೇಕ್ ನ್ಯೂಸ್ ನಶೆಗೆ ಒಳಗಾಗಬೇಡಿ: ಸಿಎಂ ಡಿ.ಕೆ. ಶಿವಕುಮಾರ್

ಸತ್ಯಾಂಶ ಪರಿಶೀಲಿಸಿ ಸುದ್ದಿ ಪ್ರಸಾರ ಮಾಡಿ; ಫೇಕ್ ನ್ಯೂಸ್ ನಶೆಗೆ ಒಳಗಾಗಬೇಡಿ: ಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು: ಸ್ವಾತಂತ್ರ್ಯ ಪೂರ್ವದಿಂದಲೂ ಪತ್ರಿಕೋದ್ಯಮವು ದೇಶದ ಪ್ರಗತಿ, ಪ್ರಜಾಪ್ರಭುತ್ವದ ಬಲವರ್ಧನೆ ಹಾಗೂ ಸಮಾಜದ ಜಾಗೃತಿಗೆ ನಿರ್ಣಾಯಕ ಪಾತ್ರ ವಹಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. 1843ರಲ್ಲಿ ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ ಪ್ರಕಟವಾದ ಐತಿಹಾಸಿಕ ದಿನದ ಅಂಗವಾಗಿ ಕರ್ನಾಟಕ ಮಾಧ್ಯಮ ಅಕಾಡೆಮಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪತ್ರಕರ್ತರು ಮಾಹಿತಿ ತಲುಪಿಸುವುದು, ಆಡಳಿತವನ್ನು ಪ್ರಶ್ನಿಸುವುದು ಹಾಗೂ ಸಮಾಜವನ್ನು ಸತ್ಯದತ್ತ ಕೊಂಡೊಯ್ಯುವ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದ ಮುಖ್ಯಮಂತ್ರಿ, ಸತ್ಯದ ಪರ ಧ್ವನಿಯಾಗಿ, ಅನ್ಯಾಯದ ವಿರುದ್ಧ ಹೋರಾಡುವ ಎಲ್ಲಾ ಮಾಧ್ಯಮ ಮಿತ್ರರಿಗೆ ಪತ್ರಿಕಾ ದಿನಾಚರಣೆಯ ಶುಭಾಶಯಗಳನ್ನು ಸಲ್ಲಿಸಿದರು.

ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾರಂಗವು ಪ್ರಜಾಪ್ರಭುತ್ವದ ನಾಲ್ಕು ಪ್ರಮುಖ ಸ್ತಂಭಗಳಾಗಿದ್ದು, ಉಳಿದ ಮೂರು ಅಂಗಗಳು ಎಡವಿದಾಗ ಅದನ್ನು ತೋರಿಸಿ ತಿದ್ದುವ ಜವಾಬ್ದಾರಿ ಪತ್ರಿಕಾರಂಗದ ಮೇಲಿದೆ ಎಂದು ಹೇಳಿದರು. ಪತ್ರಕರ್ತರು ಯಾವುದೇ ಸುದ್ದಿ ಬರೆಯುವಾಗ ಆತ್ಮಸಾಕ್ಷಿಯನ್ನು ಗಮನದಲ್ಲಿಟ್ಟುಕೊಂಡು, ಸತ್ಯಾಸತ್ಯತೆ ಪರಿಶೀಲಿಸಿ ವರದಿ ಮಾಡಬೇಕು ಎಂದು ಮನವಿ ಮಾಡಿದರು.

ಇತ್ತೀಚಿನ ದಿನಗಳಲ್ಲಿ ಫೇಕ್ ನ್ಯೂಸ್ ಎಂಬ ನಶೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಕಳೆದ ಕೆಲವು ತಿಂಗಳುಗಳಿಂದ ಆರೋಗ್ಯ ತಪಾಸಣೆ ಮಾಡಿಸಿರಲಿಲ್ಲ. ನಿಯಮಿತ ತಪಾಸಣೆಗಾಗಿ ಆಸ್ಪತ್ರೆಗೆ ತೆರಳಿದ್ದಾಗ, ತಾವು ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂಬ ಸುಳ್ಳು ಸುದ್ದಿ ಕೆಲ ಮಾಧ್ಯಮಗಳಲ್ಲಿ ಪ್ರಸಾರವಾಯಿತು ಎಂದು ಉದಾಹರಣೆ ನೀಡಿದರು. ಯಾರೋ ಹೇಳಿದ ಮಾಹಿತಿಯನ್ನು ತಕ್ಷಣ ಪ್ರಸಾರ ಮಾಡದೆ, ಸತ್ಯಾಂಶ ಪರಿಶೀಲಿಸಿ ಮಾತ್ರ ಸುದ್ದಿ ಪ್ರಕಟಿಸಬೇಕು ಎಂದು ಸಲಹೆ ನೀಡಿದರು.

ಮೇಕೆದಾಟು ಪಾದಯಾತ್ರೆಯ ಸಂದರ್ಭವನ್ನೂ ಪ್ರಸ್ತಾಪಿಸಿದ ಮುಖ್ಯಮಂತ್ರಿ, ರಾಜ್ಯದ ಜನರ ಹಿತಕ್ಕಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಪಾದಯಾತ್ರೆ ನಡೆಸಿದ್ದೆವು. ಆ ವೇಳೆ ಸತತ ಕೆಲಸದಿಂದ ಆಯಾಸಗೊಂಡು ಕೆಲವೆಡೆ ತೂಗಾಡಿದ ದೃಶ್ಯವನ್ನು ತಪ್ಪಾಗಿ ಅರ್ಥೈಸಿ, ಮದ್ಯಪಾನ ಮಾಡಿರುವಂತೆ ಬಿಂಬಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಅಂತಹ ತಪ್ಪು ಸುದ್ದಿಗಳು ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವ್ಯಕ್ತಿಗಳ ಮಾನಹಾನಿಗೆ ಕಾರಣವಾಗುತ್ತಿವೆ. ಸತ್ಯಾಂಶ ತಿಳಿಯದೆ ಸುದ್ದಿ ಪ್ರಸಾರ ಮಾಡಿದರೆ ಮಾಧ್ಯಮಗಳ ಮೇಲಿನ ಜನರ ವಿಶ್ವಾಸ ಕುಗ್ಗುತ್ತದೆ. ಆದ್ದರಿಂದ ಪ್ರತಿಯೊಬ್ಬ ಪತ್ರಕರ್ತರೂ ಜವಾಬ್ದಾರಿಯಿಂದ, ವಾಸ್ತವಾಂಶ ಆಧರಿಸಿ ವರದಿ ಮಾಡುವ ಮೂಲಕ ಪತ್ರಿಕೋದ್ಯಮದ ಗೌರವವನ್ನು ಉಳಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದರು.

RELATED ARTICLES
- Advertisment -
Google search engine

Most Popular