ಬೆಂಗಳೂರು : 2028ರೊಳಗೆ ರಾಜ್ಯವನ್ನು ಸಂಪೂರ್ಣ ಡ್ರಗ್ಸ್ ಮುಕ್ತ ಹಾಗೂ ವ್ಯಸನಮುಕ್ತ ಕರ್ನಾಟಕವನ್ನಾಗಿ ರೂಪಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ನಗರದ ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಾದಕ ವಸ್ತು ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನಾಚರಣೆ–2026 ಕಾರ್ಯಕ್ರಮದಲ್ಲಿ ‘ಬೇಡ BRO’ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಯುವಜನತೆ ಸರ್ಕಾರದೊಂದಿಗೆ ಕೈಜೋಡಿಸಿದರೆ ರಾಜ್ಯದಲ್ಲಿನ ಮಾದಕ ವಸ್ತುಗಳ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ವ್ಯಸನದಿಂದ ದೂರವಿದ್ದು ಆರೋಗ್ಯಕರ ಮತ್ತು ಸಂತೋಷದ ಜೀವನ ನಡೆಸಬೇಕು. ಸ್ನೇಹಿತರ ಒತ್ತಡಕ್ಕೆ ಮಣಿದು ಡ್ರಗ್ಸ್‌ನತ್ತ ಮುಖ ಮಾಡಬಾರದು. ನಿಮ್ಮ ಸುತ್ತಮುತ್ತಲಿನವರಿಗೂ ಈ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಇನ್ನೂ ಕಳೆದ ಮೂರು ವರ್ಷಗಳಲ್ಲಿ ಮಾಜಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಅವಧಿಯಲ್ಲಿ ಸುಮಾರು ₹89 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ನಾಶಪಡಿಸಲಾಗಿದ್ದು, ಪೋಷಕರು ತಮ್ಮ ಮಕ್ಕಳಲ್ಲಿ ಡ್ರಗ್ಸ್ ವ್ಯಸನ ಕಂಡುಬಂದರೆ ಸಮಾಜದ ಭಯದಿಂದ ಅದನ್ನು ಮುಚ್ಚಿಡಬಾರದು ಎಂದರು. ಜೊತೆಗೆ ಸೂಕ್ತ ಸಮಾಲೋಚನೆ ನೀಡಿ ಪೊಲೀಸರನ್ನು ಸಂಪರ್ಕಿಸಿದರೆ ಡ್ರಗ್ಸ್ ಪೂರೈಕೆ ಜಾಲವನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ. ಮಾಹಿತಿ ನೀಡುವ ಮಕ್ಕಳ ಹಾಗೂ ಕುಟುಂಬಗಳ ಗುರುತನ್ನು ಗೌಪ್ಯವಾಗಿಡುವಂತೆ ಪೊಲೀಸ್ ಇಲಾಖೆಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಇನ್ನೂ ಇದೇ ವೇಳೆ ಡ್ರಗ್ಸ್ ಜಾಲದ ಕುರಿತು ಗೌಪ್ಯ ಮಾಹಿತಿ ನೀಡುವವರಿಗೆ ಪೊಲೀಸ್ ಇಲಾಖೆ ಬಹುಮಾನ ನೀಡಲಿದೆ ಎಂದು ತಿಳಿಸಿದರು. ಪಾನ್ ಮಸಾಲಾ ಮತ್ತು ಗುಟ್ಕಾಗಳಲ್ಲಿ ಮಾದಕ ಪದಾರ್ಥಗಳನ್ನು ಬೆರೆಸಿ ಮಾರಾಟ ಮಾಡುವುದರ ಜೊತೆಗೆ ಮೊಬೈಲ್ ಹಾಗೂ ದೂರವಾಣಿ ಜಾಲದ ಮೂಲಕ ಮನೆ ಮನೆಗೆ ಡ್ರಗ್ಸ್ ಪೂರೈಕೆ ಮಾಡುವ ಜಾಲವೂ ಸಕ್ರಿಯವಾಗಿದೆ ಎಂಬ ಮಾಹಿತಿ ಸರ್ಕಾರಕ್ಕೆ ಲಭ್ಯವಾಗಿದೆ. ಇಂತಹ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗೃಹ, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಡ್ರಗ್ಸ್ ನಿರ್ಮೂಲನೆಗೆ ರಾಜ್ಯ ಸರ್ಕಾರ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಅನುಸರಿಸುತ್ತಿದೆ. ಡ್ರಗ್ಸ್ ವಿರುದ್ಧದ ಹೋರಾಟವನ್ನು ಕೇವಲ ಪೊಲೀಸ್ ಕಾರ್ಯಾಚರಣೆಗೆ ಸೀಮಿತಗೊಳಿಸದೆ ಜನಾಂದೋಲನವಾಗಿ ರೂಪಿಸುವ ಉದ್ದೇಶದಿಂದ ‘ಆಪರೇಷನ್ RISE’ (Refuse, Inform, Support, Empower) ಕಾರ್ಯಕ್ರಮವನ್ನು ವಿವಿಧ ಇಲಾಖೆಗಳ ಸಹಯೋಗದಲ್ಲಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ರಾಜ್ಯಾದ್ಯಂತ ಆರಂಭವಾಗಿರುವ ‘ಬೇಡ BRO’ ಅಭಿಯಾನದಡಿ ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾಲಯಗಳು ಹಾಗೂ ಯುವಜನರು ಹೆಚ್ಚಿರುವ ಪ್ರದೇಶಗಳಲ್ಲಿ ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಸ್ನೇಹಿತರ ಒತ್ತಡದಿಂದ ಯುವಕರು ಡ್ರಗ್ಸ್ ವ್ಯಸನಕ್ಕೆ ಒಳಗಾಗುವ ಅಪಾಯದ ಕುರಿತು ವಿಶೇಷ ಅರಿವು ಮೂಡಿಸಲಾಗುವುದು ಎಂದರು.
ಒಬ್ಬ ಸ್ನೇಹಿತನ ತಪ್ಪು ಪ್ರಭಾವ ಇಡೀ ಜೀವನವನ್ನೇ ಹಾಳು ಮಾಡಬಹುದು ಎಂಬ ಸಂದೇಶವನ್ನು ‘ಬೇಡ BRO’ ಅಭಿಯಾನದ ಮೂಲಕ ಯುವಜನರಿಗೆ ತಲುಪಿಸಲಾಗುತ್ತಿದೆ. ಇದು ಕೇವಲ ಜಾಗೃತಿ ಅಭಿಯಾನವಲ್ಲ, ಯುವಕರ ಬದುಕನ್ನು ರಕ್ಷಿಸುವ ಸಾಮಾಜಿಕ ಚಳವಳಿಯಾಗಿದೆ” ಎಂದು ಪ್ರಿಯಾಂಕ್ ಖರ್ಗೆ ಹೇಳಿದರು. ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್ ಅರ್ಷದ್, ಡಿಜಿ ಮತ್ತು ಐಜಿಪಿ ಎಂ.ಎ. ಸಲೀಂ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಇನ್ನೂ ರಾಜ್ಯ ಸರ್ಕಾರದ ಅಂಕಿ-ಅಂಶಗಳ ಪ್ರಕಾರ, 2026ರ ಮೇ 31ರವರೆಗೆ ಕರ್ನಾಟಕದಲ್ಲಿ ಸುಮಾರು ₹184.72 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈ ಸಂಬಂಧ 1,406 ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಲಾಗಿದೆ. ಅಲ್ಲದೆ 6,651 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಜೊತೆಗೆ 5,090 ಡ್ರಗ್ ಸೇವಕರು ಹಾಗೂ 17 ಡ್ರಗ್ ತಯಾರಕರನ್ನು ಬಂಧಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.



