Thursday, May 14, 2026
Google search engine

Homeರಾಜಕೀಯಸಿಎಂ ಕುರ್ಚಿ ನಮ್ಮ ಪಕ್ಷದ ಆಂತರಿಕ ವಿಚಾರ : ಪ್ರಧಾನಿ ಮೋದಿ ಹೇಳಿಕೆಗೆ ರಾಜಣ್ಣ ತಿರುಗೇಟು

ಸಿಎಂ ಕುರ್ಚಿ ನಮ್ಮ ಪಕ್ಷದ ಆಂತರಿಕ ವಿಚಾರ : ಪ್ರಧಾನಿ ಮೋದಿ ಹೇಳಿಕೆಗೆ ರಾಜಣ್ಣ ತಿರುಗೇಟು

ಮಧುಗಿರಿ : ಸಿಎಂ ಕುರ್ಚಿ ಅಲುಗಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸದ ವೇಳೆ ನೀಡಿದ ಹೇಳಿಕೆಗೆ ಮಾಜಿ ಸಚಿವ ಹಾಗೂ ಶಾಸಕ ಕೆ.ಎನ್.ರಾಜಣ್ಣ ತಿರುಗೇಟು ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ತುಮಕೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಮಧುಗಿರಿಯ ತಾ.ಪಂ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಕುರ್ಚಿ ಅಲುಗಾಡುತ್ತಿದೆಯೋ ಇಲ್ಲವೋ ಎಂಬುದು ನಮ್ಮ ಪಕ್ಷದ ಆಂತರಿಕ ವಿಚಾರ. ಅದಕ್ಕೂ ಪ್ರಧಾನಿಯವರಿಗೂ ಏನು ಸಂಬಂಧ? ಎಂದು ಪ್ರಶ್ನಿಸಿದರು.

ಅಲ್ಲದೆ ಪಶ್ಚಿಮ ಬಂಗಾಳದಲ್ಲಿ ಆಡಳಿತ ಯಂತ್ರದ ದುರುಪಯೋಗದ ಮೂಲಕ ಬಿಜೆಪಿ ಗೆದ್ದಿದೆ ಎಂದು ಆರೋಪಿಸಿದ ರಾಜಣ್ಣ, ಜನಾದೇಶಕ್ಕೆ ತಲೆಬಾಗಲೇಬೇಕು ಎಂದರಲ್ಲೆದೆ, ಹಿಂದಿನ ಪ್ರಧಾನಿ ಇಂದಿರಾ ಗಾಂಧಿ ಹೆಸರಿನಲ್ಲೇ 200ಕ್ಕೂ ಹೆಚ್ಚು ಸಂಸದರು ಗೆಲ್ಲುತ್ತಿದ್ದರು. ಆದರೆ ಪರಿಸ್ಥಿತಿಗಳ ಒತ್ತಡದಿಂದ ಅವರು ಕೂಡ ಸೋಲು ಅನುಭವಿಸಬೇಕಾಯಿತು. ರಾಜಕೀಯದಲ್ಲಿ ಯಾರಿಗೂ ಜನಪ್ರಿಯತೆ ಶಾಶ್ವತವಲ್ಲ ಎಂದು ಹೇಳಿದರು.

ಇಂದಿರಾ ಗಾಂಧಿಯವರ ನಂತರ ದೇಶದಲ್ಲಿ ದೊಡ್ಡ ಮಟ್ಟದ ಮಾಸ್ ಲೀಡರ್ ಯಾರಾದರೂ ಇದ್ದರೆ ಅದು ಮೋದಿಯವರು. ಇದು ಹೊಗಳಿಕೆ ಅಲ್ಲ, ವಾಸ್ತವಾಂಶ. ಆದರೆ ಜನಪ್ರಿಯತೆ ಶಾಶ್ವತವಲ್ಲ ಎಂಬುದನ್ನು ಅವರು ಅರಿಯಬೇಕು ಎಂದು ತಿಳಿಸಿದರು.

ಇನ್ನು ಪ್ರಧಾನಿ ಮೋದಿ “ಬಂಗಾರ ಖರೀದಿಸಬೇಡಿ” ಎಂದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಆಕಾಶದಲ್ಲಿದ್ದು ಮಾತನಾಡುವ ಗಾಳಿ ಮಾತುಗಳಿಗೆ ಅರ್ಥವಿಲ್ಲ. ಮೊದಲು ನೆಲದ ವಾಸ್ತವತೆ ತಿಳಿದು ಮಾತನಾಡಲಿ” ಎಂದು ವ್ಯಂಗ್ಯವಾಡಿದರು.

ಇದೇ ವೇಳೆ ತಮಿಳುನಾಡಿನ ನೂತನ ಮುಖ್ಯಮಂತ್ರಿ ವಿಜಯ್ ಅವರಿಗೆ ರಾಹುಲ್‌ ಗಾಂಧಿ ಅಭಿನಂದನೆ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ರಾಜಣ್ಣ, “ರಾಹುಲ್ ಅಭಿನಂದನೆ ಸಲ್ಲಿಸಿದರೆ ಕಾಂಗ್ರೆಸ್ ನಾಯಕರೆಲ್ಲ ಅಭಿನಂದಿಸಿದಂತೆಯೇ. ಆದರೆ ವಿಜಯ್ ಅವರ ರಾಜಕೀಯ ಪಯಣ ಸುಲಭವಲ್ಲ” ಎಂದರು.

ಅಲ್ಲದೆ, 700 ಮದ್ಯದಂಗಡಿಗಳನ್ನು ಮುಚ್ಚುವ ತೀರ್ಮಾನ ಕುರಿತು ಮಾತನಾಡಿದ ಅವರು, ರಾಜ್ಯಕ್ಕೆ ಆದಾಯ ತರುವ ಮಾರ್ಗಗಳನ್ನು ಬಂದ್ ಮಾಡಿದರೆ ಉಚಿತ ಯೋಜನೆಗಳಿಗೆ ಹಣ ಹೇಗೆ ಹೊಂದಿಸುತ್ತಾರೆ? ಇದು ಅನುಭವದ ಕೊರತೆಯನ್ನು ತೋರಿಸುತ್ತದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular