ಮೈಸೂರು: ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತ ಮುಖಂಡರು ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. 2026-27ನೇ ಸಾಲಿನ ಕೇಂದ್ರ ಸರ್ಕಾರ ನಿಗದಿ ಮಾಡಿರುವ ಎಫ್‌ಆರ್‌ಪಿ ದರ ಅವೈಜ್ಞಾನಿಕವಾಗಿದ್ದು, ರಾಜ್ಯ ಸರ್ಕಾರ ಎಸ್‌ಎಪಿ ಕಾಯ್ದೆ ಅನ್ವಯ ಪ್ರತಿ ಟನ್ ಕಬ್ಬಿಗೆ ₹4500 ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು. ಸಕ್ಕರೆ ಕಾರ್ಖಾನೆಗಳ ಮುಂಭಾಗ ತೂಕದ ಯಂತ್ರ ಅಳವಡಿಸಿ, ಸಕ್ಕರೆ ಇಳುವರಿಯಲ್ಲಿ ನಡೆಯುವ ಮೋಸ ತಡೆಯಲು ಪ್ರತ್ಯೇಕ ಲ್ಯಾಬ್ ಸ್ಥಾಪಿಸುವಂತೆ ಆಗ್ರಹಿಸಿದರು.
ರಸಗೊಬ್ಬರ ದರ ಏರಿಕೆಯನ್ನು ಕೇಂದ್ರ ಸರ್ಕಾರ ತಕ್ಷಣ ಹಿಂಪಡೆದು, ಎಫ್‌ಐಡಿ ರೈತರಿಗಷ್ಟೇ ಸೀಮಿತಗೊಳಿಸದೆ ಎಲ್ಲ ರೈತರಿಗೆ ಮುಕ್ತವಾಗಿ ಗೊಬ್ಬರ ಪೂರೈಸಬೇಕು ಎಂದು ಮನವಿ ಮಾಡಿದರು. ನಂಜನಗೂಡು ತಾಲೂಕಿನ ಹುರ ಏತ ನೀರಾವರಿ ಯೋಜನೆ ಕಾಮಗಾರಿ ವಿಳಂಬವಾಗಿರುವುದರಿಂದ ತಕ್ಷಣ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಚುಂಚನಕಟ್ಟೆ ಶೀರಾಮ ಸಕ್ಕರೆ ಕಾರ್ಖಾನೆಯನ್ನು ಜೂನ್ ಹಾಗೂ ಜುಲೈ ತಿಂಗಳಲ್ಲಿ ಪ್ರಾರಂಭಿಸಿ ರೈತರಿಗೆ ಅನುಕೂಲ ಕಲ್ಪಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು. ಮಳೆ ಕೊರತೆಯಿಂದ ಜಿಲ್ಲೆಯ ಕೆರೆ-ಕಟ್ಟೆಗಳನ್ನು ಹೂಳೆತ್ತಿ ಜನ ಜಾನುವಾರುಗಳಿಗೆ ನೀರು ಸಂಗ್ರಹಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ನಿರಂತರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ರಾಜ್ಯ ಗೌರವಾಧ್ಯಕ್ಷರಾದ ನಂದೀಶ್, ಜಿಲ್ಲಾ ಕಾರ್ಯದರ್ಶಿ ಕುಮಾರ್, ಸಂಘಟನಾ ಕಾರ್ಯದರ್ಶಿ ಎಂ ಸೋಮಣ್ಣ, ನಂಜನಗೂಡು ತಾಲೂಕು ಅಧ್ಯಕ್ಷರು, ಅಂಬಳೆ ಮಹದೇವಸ್ವಾಮಿ ಟಿ ನರಸೀಪುರ ತಾಲ್ಲೂಕು ಅಧ್ಯಕ್ಷರು ಬಿ ಸಿ ಹಳ್ಳಿ ರವಿ, ಘಟಕದ ಅಧ್ಯಕ್ಷರುಗಳಾದ ಕುಮಾರಸ್ವಾಮಿ, ಲೋಕೇಶ್ ದೊಡ್ಡಕಾನ್ಯ, ಮಹದೇವಪ್ಪ ಕರೊಟ್ಟಿ, ಮದನ್ ಕುರಟ್ಟಿ ,ಗುರುಸ್ವಾಮಿ ಜೀವನ್ ಅಂಡುವಿನಹಳ್ಳಿ, ರವಿ, ಸಿದ್ದರಾಜು, ಶಿವಣ್ಣ, ಮಹೇಶ್ ಇನ್ನು ಮುಂತಾದವರು ಭಾಗವಹಿಸಿದ್ದರು.



