Tuesday, July 14, 2026
Google search engine

Homeಅಪರಾಧಪರಸ್ತ್ರೀ ವ್ಯಾಮೋಹ ; ಪತ್ನಿ, ಮಾವನ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನ ಪೊಲೀಸ್‌ ಅಧಿಕಾರಿ ಅರೆಸ್ಟ್‌

ಪರಸ್ತ್ರೀ ವ್ಯಾಮೋಹ ; ಪತ್ನಿ, ಮಾವನ ಮೇಲೆ ಮಚ್ಚಿನಿಂದ ಹಲ್ಲೆಗೆ ಯತ್ನ ಪೊಲೀಸ್‌ ಅಧಿಕಾರಿ ಅರೆಸ್ಟ್‌

ಬೆಂಗಳೂರು : ಉದ್ಯಮಿಯೊಬ್ಬರಿಂದ ₹50 ಲಕ್ಷ ಲಂಚದ ಬೇಡಿಕೆ ಇಟ್ಟು ಲೋಕಾಯುಕ್ತ ಬಲೆಗೆ ಬಿದ್ದು ಅಮಾನತಾಗಿದ್ದ ಪಿಎಸ್‌ಐ ಬೈರಪ್ಪ ವಿರುದ್ಧ ಇದೀಗ ಪತ್ನಿ ಹಾಗೂ ಮಾವನ ಮೇಲೆಯೇ ಮಚ್ಚಿನಿಂದ ಹಲ್ಲೆಗೆ ಯತ್ನಿಸಿದ ಗಂಭೀರ ಆರೋಪ ಕೇಳಿಬಂದಿದೆ. ಈ ಸಂಬಂಧ ಪತ್ನಿ ನಗರ ಪೊಲೀಸ್ ಆಯುಕ್ತರು ಹಾಗೂ ಡಿಜಿಪಿಗೆ ದೂರು ನೀಡಲು ಮುಂದಾಗಿದ್ದಾರೆ.

ಐದು ವರ್ಷಗಳ ಹಿಂದೆ ಬೈರಪ್ಪ ಮತ್ತು ಸಂತ್ರಸ್ತೆಯ ವಿವಾಹವಾಗಿತ್ತು. ಆರಂಭದ ಮೂರು ವರ್ಷ ದಾಂಪತ್ಯ ಜೀವನ ಸುಗಮವಾಗಿದ್ದರೂ, ಬಳಿಕ ಮನೆಗೆ ಇತರ ಯುವತಿಯರನ್ನು ಕರೆತರುವುದು ಸೇರಿದಂತೆ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿತ್ತು ಎಂದು ಪತ್ನಿ ಆರೋಪಿಸಿದ್ದಾರೆ.

ಈ ಬಗ್ಗೆ ಪ್ರಶ್ನಿಸಿದ ಬಳಿಕ ಬೈರಪ್ಪ ಮದ್ಯಪಾನ ಮಾಡಿ ಮನೆಗೆ ಬಂದು ನಿತ್ಯ ಗಲಾಟೆ ನಡೆಸುತ್ತಿದ್ದು, ಪತ್ನಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ನಿನ್ನ ತಂದೆ ಮನೆಯಿಂದ ₹50 ಲಕ್ಷ ಹಣ ತಂದುಕೊಡು, ಇಲ್ಲದಿದ್ದರೆ ನೀನು ಬೇಡ ಎಂದು ಒತ್ತಾಯಿಸಿ ಹಲ್ಲೆ ನಡೆಸುತ್ತಿದ್ದ. ಹೆಣ್ಣು ಮಗು ಜನಿಸಿದ ಬಳಿಕವೂ ಅನುಮಾನ ವ್ಯಕ್ತಪಡಿಸಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾರೆ.

ಇನ್ನೂ ಜುಲೈ 12ರಂದು ಮನೆಯಲ್ಲಿ ನಡೆದ ಗಲಾಟೆಯ ವೇಳೆ ಪರಿಸ್ಥಿತಿ ಶಾಂತಗೊಳಿಸಲು ಬಂದಿದ್ದ ಮಾವನ ಮೇಲೆಯೇ ಬೈರಪ್ಪ ಮಚ್ಚು ಹಿಡಿದು ಹಲ್ಲೆಗೆ ಮುಂದಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಪತ್ನಿ ನೀಡಿದ ದೂರಿನ ಮೇರೆಗೆ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಮೊದಲು ಎನ್‌ಸಿಆರ್ ದಾಖಲಿಸಲಾಗಿತ್ತು. ಬಳಿಕ ಪ್ರಾಥಮಿಕ ತನಿಖೆಯಲ್ಲಿ ಆರೋಪಗಳಿಗೆ ಪೂರಕ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಎಫ್‌ಐಆರ್ ದಾಖಲಿಸಿ ಪೊಲೀಸರು ಬೈರಪ್ಪನನ್ನು ಬಂಧಿಸಿದ್ದಾರೆ.

ಪೊಲೀಸ್ ಅಧಿಕಾರಿಯಾಗಿದ್ದರೂ ಕಾನೂನು ಉಲ್ಲಂಘಿಸಿ ಕ್ರೌರ್ಯ ಮೆರೆದ ಆರೋಪದಡಿ ಬೈರಪ್ಪ ವಿರುದ್ಧ ಕೆಂಗೇರಿ ಪೊಲೀಸರು ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಕ್ರಮ ಕೈಗೊಂಡಿದ್ದಾರೆ.

RELATED ARTICLES
- Advertisment -
Google search engine

Most Popular