Monday, July 13, 2026
Google search engine

Homeರಾಜ್ಯಕಂಬಳ ಟ್ರ್ಯಾಕ್ ನಿರ್ಮಾಣಕ್ಕೆ ಪರಿಸರ ಸಂಕಷ್ಟ : 25 ಮರ ಕಡಿತ ಆರೋಪ, ಮೂವರ ವಿರುದ್ಧ...

ಕಂಬಳ ಟ್ರ್ಯಾಕ್ ನಿರ್ಮಾಣಕ್ಕೆ ಪರಿಸರ ಸಂಕಷ್ಟ : 25 ಮರ ಕಡಿತ ಆರೋಪ, ಮೂವರ ವಿರುದ್ಧ FIR

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಲು ಉದ್ದೇಶಿಸಿರುವ ಕಂಬಳದ ಸುತ್ತ ವಿವಾದಗಳು ಮುಂದುವರಿದಿವೆ. ಕಂಬಳದ ಕೆಸರು ಗದ್ದೆ (ಟ್ರ್ಯಾಕ್) ನಿರ್ಮಾಣಕ್ಕಾಗಿ ಸಾತಗಳ್ಳಿ ಪ್ರದೇಶದಲ್ಲಿ ಮೈದಾನ ಸಿದ್ಧಪಡಿಸುವ ವೇಳೆ ಪರಿಸರ ಹಾನಿ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣ ಕಾನೂನು ತಿರುವು ಪಡೆದುಕೊಂಡಿದೆ.

25 ಮರಗಳ ಕಡಿತ ಆರೋಪ, FIR ದಾಖಲು : ಕಂಬಳ ಟ್ರ್ಯಾಕ್ ನಿರ್ಮಾಣಕ್ಕಾಗಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅರಣ್ಯ ಇಲಾಖೆಯ ಅನುಮತಿ ಪಡೆಯದೆ ಮರಗಳನ್ನು ತೆರವುಗೊಳಿಸಿದೆ ಎಂಬ ಆರೋಪದ ಹಿನ್ನೆಲೆ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದ್ದು, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರು ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಸ್ಥಳದಲ್ಲಿ 20 ಜಾಲಿ ಮರಗಳು ಹಾಗೂ 5 ಇತರೆ ಮರಗಳು ಸೇರಿ ಒಟ್ಟು 25 ಮರಗಳನ್ನು ಕಡಿದ ಆರೋಪದಡಿ ಕರ್ನಾಟಕ ಅರಣ್ಯ ಕಾಯ್ದೆ 1963ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಪರಿಸರ ಹೋರಾಟಗಾರರ ಆಕ್ರೋಶ : ಕ್ರೀಡೆಯ ಹೆಸರಿನಲ್ಲಿ ಪರಿಸರಕ್ಕೆ ಹಾನಿ ಮಾಡುವುದು ಸರಿಯಲ್ಲ ಎಂದು ಮೈಸೂರಿನ ಪರಿಸರ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದು, ಸಾಂಪ್ರದಾಯಿಕ ಕ್ರೀಡೆಯನ್ನು ಉಳಿಸುವ ಉದ್ದೇಶವಿದ್ದರೂ, ಮರಗಳನ್ನು ಕಡಿದು ಕಾರ್ಯಕ್ರಮ ನಡೆಸುವ ಬದಲು ಪರಿಸರಕ್ಕೆ ಹಾನಿಯಾಗದ ಪರ್ಯಾಯ ಸ್ಥಳವನ್ನು ಆಯ್ಕೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಕಂಬಳ ಆಯೋಜನೆಗೆ ಹೆಚ್.ಡಿ. ಕುಮಾರಸ್ವಾಮಿ ವಿರೋಧ : ಇದೇ ವೇಳೆ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜನೆ ವಿಚಾರ ರಾಜಕೀಯ ಚರ್ಚೆಗೂ ಕಾರಣವಾಗಿದ್ದು, ಸಂಸದ ಯದುವೀರ್ ಒಡೆಯರ್ ಅವರು ದಸರಾ ಸಂದರ್ಭದಲ್ಲಿ ಕಂಬಳ ಆಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದು, ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೂಡ ಇದೇ ಅಭಿಪ್ರಾಯಕ್ಕೆ ಬೆಂಬಲ ನೀಡಿದ್ದಾರೆ.

ಮೈಸೂರು ದಸರಾ ತನ್ನದೇ ಆದ ಐತಿಹಾಸಿಕ ಮತ್ತು ಧಾರ್ಮಿಕ ಪರಂಪರೆಯನ್ನು ಹೊಂದಿದ್ದು, ಅದಕ್ಕೆ ಧಕ್ಕೆ ತರುವ ರೀತಿಯಲ್ಲಿ ಹೊಸ ಕಾರ್ಯಕ್ರಮಗಳನ್ನು ಸೇರಿಸುವ ಅಗತ್ಯವಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕಂಬಳವು ಕರಾವಳಿ ಭಾಗದ ಜನಪದ ಸಂಸ್ಕೃತಿ ಮತ್ತು ನಂಬಿಕೆಯ ಪ್ರತೀಕವಾಗಿದ್ದು, ಅದನ್ನು ಅದರ ಮೂಲ ನೆಲೆಯಲ್ಲೇ ಆಚರಿಸುವುದು ಸೂಕ್ತ. ಮೈಸೂರು ಹಾಗೂ ಕರಾವಳಿ ಭಾಗದ ಜನರ ಭಾವನೆಗಳಿಗೆ ಧಕ್ಕೆಯಾಗದಂತೆ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


RELATED ARTICLES
- Advertisment -
Google search engine

Most Popular