ಬೆಂಗಳೂರು : ಕರ್ನಾಟಕದಲ್ಲಿ ದೇಶದ ಮೊದಲ ಸರ್ಕಾರದ ನೇತೃತ್ವದ ಕೃತಕ ಬುದ್ಧಿಮತ್ತೆ (AI) ವಿಶ್ವವಿದ್ಯಾಲಯ ಹಾಗೂ AI ಹಬ್ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.
ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರದಲ್ಲಿ (BIEC) ನಡೆದ ಗೂಗಲ್ ಐ/ಒ ಕನೆಕ್ಟ್ ಇಂಡಿಯಾ 2026 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, AI ಕ್ಷೇತ್ರದಲ್ಲಿ ಸಂಶೋಧನೆ, ನಾವೀನ್ಯತೆ ಹಾಗೂ ಪ್ರತಿಭಾ ಅಭಿವೃದ್ಧಿಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಸ್ತಾವಿತ AI ವಿಶ್ವವಿದ್ಯಾಲಯವು ಜಾಗತಿಕ ಮಟ್ಟದ AI ಪರಿಣಿತರನ್ನು ರೂಪಿಸುವುದರ ಜೊತೆಗೆ ಉನ್ನತ ಮಟ್ಟದ ಸಂಶೋಧನೆಗೆ ಉತ್ತೇಜನ ನೀಡಲಿದೆ. ಶಿಕ್ಷಣ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಸರ್ಕಾರದ ನಡುವಿನ ಸಹಯೋಗವನ್ನು ಮತ್ತಷ್ಟು ಬಲಪಡಿಸುವ ವೇದಿಕೆಯಾಗಲಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಇನ್ನೂ AI ಹಬ್ ಸ್ಟಾರ್ಟ್ಅಪ್ಗಳು, ಕಂಪನಿಗಳು ಹಾಗೂ ಇತರ ಪಾಲುದಾರರಿಗೆ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲು ಇಂಕ್ಯುಬೇಷನ್ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಕೃತಕ ಬುದ್ಧಿಮತ್ತೆ ಇಂದಿನ ತಲೆಮಾರಿನ ಪ್ರಮುಖ ತಾಂತ್ರಿಕ ಕ್ರಾಂತಿಯಾಗಿದೆ ಎಂದು ಬಣ್ಣಿಸಿದ ಡಿ.ಕೆ.ಶಿವಕುಮಾರ್, ಕರ್ನಾಟಕವನ್ನು “AI-ನೇಟಿವ್ ರಾಜ್ಯ”ವನ್ನಾಗಿ ರೂಪಿಸುವುದು ಸರ್ಕಾರದ ಗುರಿಯಾಗಿದೆ ಎಂದರು.
ಆಡಳಿತದಲ್ಲಿ AI ಬಳಕೆ ಮೂಲಕ ಸಾರ್ವಜನಿಕ ಸೇವೆಗಳ ವಿತರಣೆಯನ್ನು ಪರಿಣಾಮಕಾರಿಗೊಳಿಸಲಾಗುವುದು. ಹಾಗೂ AI ಶಿಕ್ಷಕರಿಗೆ ಬೋಧನೆ ಸುಧಾರಿಸಲು, ವೈದ್ಯರಿಗೆ ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಲು, ರೈತರಿಗೆ ಉತ್ತಮ ಕೃಷಿ ಸಲಹೆ ನೀಡಲು ಹಾಗೂ ನಾಗರಿಕರಿಗೆ ಸರ್ಕಾರಿ ಸೇವೆಗಳನ್ನು ವೇಗವಾಗಿ ಒದಗಿಸಲು ನೆರವಾಗಲಿದೆ ಎಂದು ಹೇಳಿದರು.
ಕರ್ನಾಟಕವು ಭಾರತದ ಸಾಫ್ಟ್ವೇರ್ ರಫ್ತಿನಲ್ಲಿ ಸುಮಾರು ಶೇ.40ರಷ್ಟು ಕೊಡುಗೆ ನೀಡುತ್ತಿದ್ದು, ಬೆಂಗಳೂರಿನಲ್ಲಿ 17 ಸಾವಿರಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳು ಹಾಗೂ ಸಾವಿರಾರು ಗ್ಲೋಬಲ್ ಕ್ಯಾಪೆಬಿಲಿಟಿ ಸೆಂಟರ್ಗಳು (GCCs) ಕಾರ್ಯನಿರ್ವಹಿಸುತ್ತಿವೆ ಎಂದು ಮುಖ್ಯಮಂತ್ರಿ ತಿಳಿಸಿದರು.
AI ನಾವೀನ್ಯತೆ, ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಉನ್ನತ ಗಣಕ ತಂತ್ರಜ್ಞಾನಕ್ಕೆ ಅಗತ್ಯವಾದ ಡೇಟಾ ಸೆಂಟರ್ಗಳು ಸೇರಿದಂತೆ ಡಿಜಿಟಲ್ ಮೂಲಸೌಕರ್ಯವನ್ನು ಸರ್ಕಾರ ಮತ್ತಷ್ಟು ಬಲಪಡಿಸಲಿದೆ ಎಂದರು. ಗೂಗಲ್ ಸಂಸ್ಥೆ ಕರ್ನಾಟಕದೊಂದಿಗೆ ತನ್ನ ಸಹಭಾಗಿತ್ವವನ್ನು ವಿಸ್ತರಿಸುವಂತೆ ಮನವಿ ಮಾಡಿದ ಮುಖ್ಯಮಂತ್ರಿ, ಶಿಕ್ಷಣ, ಆರೋಗ್ಯ, ಕೃಷಿ, ಹವಾಮಾನ ಬದಲಾವಣೆ, ನಗರ ಸಂಚಾರ ಹಾಗೂ ಆಡಳಿತ ಕ್ಷೇತ್ರಗಳಲ್ಲಿ AI ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸಹಕರಿಸುವಂತೆ ಕರೆ ನೀಡಿದರು.
ಸ್ಟಾರ್ಟ್ಅಪ್ಗಳಿಗೆ ಬೆಂಬಲ, ವಿದ್ಯಾರ್ಥಿಗಳಿಗೆ AI ಕಲಿಕೆಯ ಅವಕಾಶ ವಿಸ್ತರಣೆ ಹಾಗೂ ಕರ್ನಾಟಕವನ್ನು ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆಯ ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಗೂಗಲ್ಗೆ ಮನವಿ ಮಾಡಿದರು. AI ತಂತ್ರಜ್ಞಾನವು ಜವಾಬ್ದಾರಿಯುತ, ಎಲ್ಲರನ್ನೂ ಒಳಗೊಂಡ ಹಾಗೂ ವಿಶ್ವಾಸಾರ್ಹವಾಗಿರಬೇಕು ಎಂದು ಒತ್ತಿ ಹೇಳಿದ ಅವರು, ಡೆವಲಪರ್ಗಳು, ಉದ್ಯಮಿಗಳು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ನಾವೀನ್ಯತೆಯ ಮುಂದಿನ ಹಂತವನ್ನು ಮುನ್ನಡೆಸಬೇಕು ಎಂದು ಕರೆ ನೀಡಿದರು.



