ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ಭೇಟಿಯ ವೇಳೆ ಪತ್ತೆಯಾದ ಜಿಲೆಟಿನ್ ಕಡ್ಡಿ ಪ್ರಕರಣವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, NIA ಸೇರಿದಂತೆ ಕೇಂದ್ರೀಯ ತನಿಖಾ ಸಂಸ್ಥೆಗಳು ತನಿಖೆ ಚುರುಕುಗೊಳಿಸಿವೆ.
ಕನಕಪುರ ರಸ್ತೆಯ ಆರ್ಟ್ ಆಫ್ ಲೀವಿಂಗ್ ಫೌಂಡೇಶನ್ ಆಶ್ರಮದಲ್ಲಿ ನಡೆದ ಧ್ಯಾನ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಪ್ರಧಾನಿ ತೆರಳುವ ಮಾರ್ಗದಲ್ಲಿರುವ ತಾತಗುಣಿ ಸಮೀಪದ ವಡೇರಹಳ್ಳಿ ಗೇಟ್ ಬಳಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದವು. ಸೋಮವಾರ (ಮೇ 11) NIA ಹಾಗೂ ಕೇಂದ್ರ ಗುಪ್ತಚರ ದಳದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಬೆಂಗಳೂರು ನಗರ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸರಿಂದ ಹೆಚ್ಚಿನ ಮಾಹಿತಿ ಸಂಗ್ರಹಿಸಿರುವ ಅಧಿಕಾರಿಗಳು, ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಪ್ರಧಾನಿಯವರ ಭದ್ರತೆಯ ಜವಾಬ್ದಾರಿ ಹೊತ್ತಿರುವ NSG ಹಾಗೂ SPG ಅಧಿಕಾರಿಗಳು ರಾಜ್ಯ ಪೊಲೀಸ್ ಇಲಾಖೆಯಿಂದ ತನಿಖೆಯ ಪ್ರಗತಿ ವರದಿ ಕೇಳಿದ್ದಾರೆ. ಇತ್ತ, ಕನಕಪುರ ರಸ್ತೆಯ ಪ್ರವೇಶ ಹಾಗೂ ನಿರ್ಗಮನ ಭಾಗಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಜಿಲೆಟಿನ್ ಕಡ್ಡಿಗಳು ಪತ್ತೆಯಾದ ಪ್ರದೇಶದ ಸುತ್ತಮುತ್ತ ಅನುಮಾನಾಸ್ಪದ ಚಟುವಟಿಕೆಗಳ ಮೇಲೂ ನಿಗಾ ವಹಿಸಲಾಗಿದ್ದು, ಸ್ಥಳೀಯ ಕಲ್ಲುಕ್ವಾರಿ ಮಾಲೀಕರು ಮತ್ತು ಕಾರ್ಮಿಕರನ್ನು ವಿಚಾರಣೆ ನಡೆಸಲಾಗುತ್ತಿದೆ. ಇದೇ ವೇಳೆ, ಪ್ರಧಾನಿ ಭೇಟಿ ಸಂದರ್ಭದಲ್ಲಿ ಕಾರ್ಯಕ್ರಮ ಸ್ಥಳದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಆರೋಪಿ ಲೋಹಿತ್‌ನ ವಿಚಾರಣೆಯನ್ನೂ ಪೊಲೀಸರು ತೀವ್ರಗೊಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಜಿಲೆಟಿನ್ ಕಡ್ಡಿಗಳನ್ನು ತಮಿಳುನಾಡಿನಿಂದ ತರಲಾಗಿದ್ದು, ಪ್ರಧಾನಿ ಸಾಗುವ ಮಾರ್ಗದ ಬಳಿ ಉದ್ದೇಶಪೂರ್ವಕವಾಗಿ ಇಡಲಾಗಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿಶೇಷ ಪೊಲೀಸ್ ತಂಡ ತಮಿಳುನಾಡಿಗೆ ತೆರಳಿ ತನಿಖೆ ಆರಂಭಿಸಿದೆ.



