ಅಹ್ಮದಾಬಾದ್ : ಐಪಿಎಲ್ ಇತಿಹಾಸದಲ್ಲೇ ಮೊದಲ ಬಾರಿಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟನ್ಸ್ ತಂಡವು ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಗಿದೆ. ರೋಚಕವಾಗಿ ನಡೆದ ಟೂರ್ನಿಯ 46ನೇ ಪಂದ್ಯದಲ್ಲಿ ಗುಜರಾತ್ 4 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.
ಅಹಮದಾಬಾದ್‌ನಲ್ಲಿ ಗುಜರಾತ್‌ಗೆ ಮೊದಲ ಗೆಲುವು
ಇದಕ್ಕೂ ಮುನ್ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಗುಜರಾತ್ ಮತ್ತು ಪಂಜಾಬ್ ತಂಡಗಳು ಎರಡು ಬಾರಿ ಮುಖಾಮುಖಿಯಾಗಿದ್ದವು. ಆ ಎರಡೂ ಬಾರಿಯೂ ಪಂಜಾಬ್ ತಂಡವು ಗುಜರಾತ್ ತಂಡವನ್ನು ಅವರದ್ದೇ ತವರಿನಲ್ಲಿ ಸೋಲಿಸಿತ್ತು. ಆದರೆ ಈ ಬಾರಿ ಇತಿಹಾಸ ಬದಲಿಸಿದ ಗುಜರಾತ್, ಪಂಜಾಬ್ ವಿರುದ್ಧ ಇಲ್ಲಿ ಚೊಚ್ಚಲ ಜಯ ದಾಖಲಿಸಿದೆ.
164 ರನ್‌ಗಳ ಗುರಿ ಬೆನ್ನಟ್ಟಿದ ಗುಜರಾತ್ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ನಾಯಕ ಶುಭಮನ್ ಗಿಲ್ ಬೇಗನೆ ಔಟಾದರು. ನಂತರ ಸಾಯಿ ಸುದರ್ಶನ್ ಮತ್ತು ಜೋಸ್ ಬಟ್ಲರ್ ಜೋಡಿಯು 53 ರನ್‌ಗಳ ಜೊತೆಯಾಟವಾಡಿ ಇನಿಂಗ್ಸ್‌ಗೆ ಆಸರೆಯಾಯಿತು. ಬಟ್ಲರ್ 26 ರನ್ ಗಳಿಸಿ ಔಟಾದರೆ, ಐಪಿಎಲ್ ಪದಾರ್ಪಣೆ ಮಾಡಿದ ನಿಶಾಂತ್ ಸಿಂಧು ಕೇವಲ 15 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಸಾಯಿ ಸುದರ್ಶನ್ ಮತ್ತು ಸುಂದರ್ ದಿಟ್ಟ ಹೋರಾಟ
ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಸಾಯಿ ಸುದರ್ಶನ್ ದಿಟ್ಟ ಹೋರಾಟ ನಡೆಸಿದರು. 15ನೇ ಓವರ್‌ವರೆಗೂ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ ಅವರು 57 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ಹತ್ತಿರ ತಂದರು. ಇದು ಈ ಸೀಸನ್‌ನಲ್ಲಿ ಅವರಿಗೆ ಮೂರನೇ ಅರ್ಧಶತಕವಾಗಿದೆ. ಇದಕ್ಕೂ ಮುನ್ನ ಬೌಲಿಂಗ್‌ನಲ್ಲಿ ಜೇಸನ್ ಹೋಲ್ಡರ್ 4 ಪ್ರಮುಖ ವಿಕೆಟ್ ಪಡೆಯುವ ಮೂಲಕ ಪಂಜಾಬ್ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿಹಾಕಿದ್ದರು.
ಕೊನೆಯ ಹಂತದಲ್ಲಿ ಪಂದ್ಯ ಮುಗಿಸುವ ಜವಾಬ್ದಾರಿ ಹೊತ್ತ ವಾಷಿಂಗ್ಟನ್ ಸುಂದರ್, ಒತ್ತಡದ ನಡುವೆಯೂ 23 ಎಸೆತಗಳಲ್ಲಿ ಅಜೇಯ 40 ರನ್ ಸಿಡಿಸಿದರು. ಅಂತಿಮವಾಗಿ ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟರು.



