ಬೆಂಗಳೂರು : ನಗರದ ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ಕೈಗೊಂಡಿರುವ ‘ಆಪರೇಷನ್ ಫುಟ್‌ಪಾತ್’ ಕಾರ್ಯಾಚರಣೆಯ ಮುಂದುವರಿದ ಭಾಗವಾಗಿ, ತೆರವುಗೊಳಿಸಿದ ಸ್ಥಳಗಳನ್ನು ಮತ್ತೆ ಆಕ್ರಮಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮುಂದಾಗಿದೆ.
ಒಮ್ಮೆ ಒತ್ತುವರಿ ತೆರವುಗೊಳಿಸಿದ ಜಾಗಗಳಲ್ಲಿ ಮತ್ತೆ ಅಕ್ರಮವಾಗಿ ಅಂಗಡಿ-ಮುಂಗಟ್ಟುಗಳನ್ನು ಸ್ಥಾಪಿಸಿ ವ್ಯಾಪಾರ ನಡೆಸಿದರೆ ಸ್ಥಳದಲ್ಲೇ ಭಾರೀ ಪ್ರಮಾಣದ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಕೆ.ಆರ್.ಮಾರ್ಕೆಟ್, ವಿಕ್ಟೋರಿಯಾ ಆಸ್ಪತ್ರೆ ರಸ್ತೆ, ಮಲ್ಲೇಶ್ವರಂ ಸೇರಿದಂತೆ ನಗರದ ಹಲವು ಭಾಗಗಳಲ್ಲಿ ಈಗಾಗಲೇ 490 ಕಿಲೋಮೀಟರ್‌ಗೂ ಹೆಚ್ಚು ಉದ್ದದ ಫುಟ್‌ಪಾತ್‌ಗಳನ್ನು ಒತ್ತುವರಿಯಿಂದ ಮುಕ್ತಗೊಳಿಸಲಾಗಿದೆ. ಇದೀಗ ಈ ಪ್ರದೇಶಗಳ ಮೇಲೆ ನಿರಂತರ ನಿಗಾ ವಹಿಸಲು ವಿಶೇಷ ತಂಡಗಳನ್ನು ನಿಯೋಜಿಸಲಾಗಿದ್ದು, ಪಾದಚಾರಿಗಳ ಹಕ್ಕು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು GBA ಎಚ್ಚರಿಕೆ ನೀಡಿದೆ.
ತೆರವು ಕಾರ್ಯಾಚರಣೆ ನಡೆಸಿದ ಬಳಿಕ ಅಧಿಕಾರಿಗಳು ಸುಮ್ಮನಾಗದೆ, ಆಯಾ ಪ್ರದೇಶಗಳಲ್ಲಿ ನಿಯಮಿತ ಮರುಪರಿಶೀಲನೆ ನಡೆಸಬೇಕು. ಫುಟ್‌ಪಾತ್‌ಗಳಲ್ಲಿ ಮತ್ತೆ ಅಕ್ರಮ ಒತ್ತುವರಿ ಕಂಡುಬಂದರೆ ತಕ್ಷಣ ಕ್ರಮ ಜರುಗಿಸುವಂತೆ ಸೂಚಿಸಲಾಗಿದೆ.
ನಗರದ ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ಶಾಶ್ವತವಾಗಿ ಒತ್ತುವರಿ ಮುಕ್ತಗೊಳಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ನಿಯಮ ಉಲ್ಲಂಘಿಸುವ ವ್ಯಾಪಾರಿಗಳಿಗೆ ಹೊಸ ದಂಡದ ನಿಯಮ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ.



