Wednesday, July 15, 2026
Google search engine

Homeಬ್ರೇಕಿಂಗ್ ನ್ಯೂಸ್108 ಆಂಬ್ಯುಲೆನ್ಸ್ ಸೇವೆಗೆ ಹೊಸ ಕಟ್ಟುನಿಟ್ಟಿನ ನಿಯಮ : 15 ನಿಮಿಷ ತಡವಾದರೆ 5,000 ರೂ....

108 ಆಂಬ್ಯುಲೆನ್ಸ್ ಸೇವೆಗೆ ಹೊಸ ಕಟ್ಟುನಿಟ್ಟಿನ ನಿಯಮ : 15 ನಿಮಿಷ ತಡವಾದರೆ 5,000 ರೂ. ದಂಡ!

ಬೆಂಗಳೂರು: ತುರ್ತು ಪರಿಸ್ಥಿತಿಯಲ್ಲಿ ರೋಗಿಗಳ ಪಾಲಿಗೆ ಸಂಜೀವಿನಿಯಂತಿರುವ ‘108’ ಆಂಬ್ಯುಲೆನ್ಸ್ ಸೇವೆಯನ್ನು ಮತ್ತಷ್ಟು ಚುರುಕುಗೊಳಿಸಲು ಕರ್ನಾಟಕ ಆರೋಗ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ. ಇನ್ಮುಂದೆ ಕರೆ ಮಾಡಿದ 15 ನಿಮಿಷಗಳ ಒಳಗೆ ಆಂಬ್ಯುಲೆನ್ಸ್ ಸ್ಥಳಕ್ಕೆ ತಲುಪದಿದ್ದರೆ, ಸಂಬಂಧಪಟ್ಟ ಏಜೆನ್ಸಿ ಅಥವಾ ಚಾಲಕರಿಗೆ 5,000 ರೂಪಾಯಿ ಭಾರೀ ದಂಡ ವಿಧಿಸಲಾಗುತ್ತದೆ ಎಂದು ಸರ್ಕಾರ ಘೋಷಿಸಿದೆ.

ಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಿರುವ ಆರೋಗ್ಯ ಸಚಿವ ಯು.ಟಿ. ಖಾದರ್, ತುರ್ತು ವೈದ್ಯಕೀಯ ಸೇವೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಆಂಬ್ಯುಲೆನ್ಸ್ ಸಿಬ್ಬಂದಿ ರೋಗಿಯಿರುವ ಸ್ಥಳವನ್ನು ತಲುಪಲು 13 ರಿಂದ ಗರಿಷ್ಠ 15 ನಿಮಿಷಗಳ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. ನಿಗದಿತ ಸಮಯ ಮೀರಿದರೆ 5,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಈ ವಿಳಂಬಕ್ಕೆ ಆ್ಯಂಬುಲೆನ್ಸ್ ಅನ್ನು ನಿಯೋಜಿಸಿರುವ ಏಜೆನ್ಸಿಯೇ ಸಂಪೂರ್ಣ ಹೊಣೆಗಾರರಾಗಿರುತ್ತಾರೆ. ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ನೆಪವೊಡ್ಡಿ ವಿಳಂಬ ಮಾಡುವುದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಸಮಯ ಪಾಲನೆ ಕಡ್ಡಾಯಗೊಳಿಸಲಾಗಿದೆ.

ಪದೇ ಪದೇ ತಾಂತ್ರಿಕ ದೋಷ ಕಾಣಿಸಿಕೊಳ್ಳುವ ಹಳೆಯ 108 ಆಂಬ್ಯುಲೆನ್ಸ್ ವಾಹನಗಳನ್ನು ಗುಜರಿಗೆ ಹಾಕಿ, ಅವುಗಳ ಬದಲಾಗಿ ಅತ್ಯಾಧುನಿಕ ಸೌಲಭ್ಯವುಳ್ಳ ಹೊಸ ವಾಹನಗಳನ್ನು ಖರೀದಿಸಲು ಸರ್ಕಾರ ಪ್ರಕ್ರಿಯೆ ಆರಂಭಿಸಿದೆ.

ಸಚಿವರ ಸ್ಪಷ್ಟನೆ

ಈ ಕುರಿತು ಮಾತನಾಡಿದ ಸಚಿವ ಯು.ಟಿ. ಖಾದರ್, “ತುರ್ತು ವೈದ್ಯಕೀಯ ಸೇವೆ ಪ್ರತಿಯೊಬ್ಬ ನಾಗರಿಕನ ಹಕ್ಕು. ಒಂದು ನಿಮಿಷದ ವಿಳಂಬವೂ ಜೀವಕ್ಕೆ ಕಂಟಕ ತರಬಹುದು. ಹೀಗಾಗಿ ಸಮಯಕ್ಕೆ ಸರಿಯಾಗಿ ರೋಗಿಯನ್ನು ಆಸ್ಪತ್ರೆಗೆ ತಲುಪಿಸುವುದೇ ನಮ್ಮ ಆದ್ಯತೆ. ನಿಯಮ ಉಲ್ಲಂಘಿಸುವ ಯಾವುದೇ ಸಂಸ್ಥೆಯ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು,” ಎಂದು ತಿಳಿಸಿದ್ದಾರೆ.

ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಎಲ್ಲಾ ಜಿಲ್ಲೆಗಳಿಗೂ ಈ ನಿಯಮ ಅನ್ವಯವಾಗಲಿದ್ದು, ಈ ಮೂಲಕ ಸಾರ್ವಜನಿಕರಿಗೆ ಉತ್ತಮ ಮತ್ತು ವೇಗದ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

RELATED ARTICLES
- Advertisment -
Google search engine

Most Popular