ಶಿಡ್ಲಘಟ್ಟ : ತಾಲೂಕಿನ ವಿವಿಧ ಭಾಗಗಳಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಅಬ್ಬರದಿಂದ ತೋಟಗಾರಿಕೆ ಬೆಳೆಗಳಿಗೆ ಭಾರೀ ಹಾನಿ ಉಂಟಾಗಿದ್ದು, ಗುರುವಾರ ಸಂಜೆ ಅನಿರೀಕ್ಷಿತವಾಗಿ ಸುರಿದ ಮಳೆ ಹಾಗೂ ಬಲವಾದ ಗಾಳಿಯಿಂದ ರೈತರ ಬದುಕಿಗೆ ದೊಡ್ಡ ಹೊಡೆತ ಬಿದ್ದಿದೆ.
ಕದಹಳ್ಳಿ, ಕನ್ನಮಂಗಲ, ಚಿಂತಡಿಪಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಿ ಕಂಡುಬಂದಿದ್ದು, ಮಾವು, ದ್ರಾಕ್ಷಿ ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳು ನೆಲಕಚ್ಚಿವೆ. ಆಲಿಕಲ್ಲು ಮಳೆಯ ಅಬ್ಬರಕ್ಕೆ ಹಣ್ಣುಗಳು ಕೊಯ್ಯುವ ಹಂತದಲ್ಲಿದ್ದ ಬೆಳೆಗಳು ಹಾನಿಗೊಳಗಾಗಿ ರೈತರು ಆರ್ಥಿಕ ನಷ್ಟಕ್ಕೆ ಗುರಿಯಾಗಿದ್ದಾರೆ. ಬಿರುಗಾಳಿಯಿಂದ ಮರಗಳು ಉರುಳಿದ್ದು, ಕೆಲವು ಕಡೆ ವಿದ್ಯುತ್ ಸಂಪರ್ಕಕ್ಕೂ ವ್ಯತ್ಯಯ ಉಂಟಾಗಿದೆ.
ಇನ್ನೂ ತೋಟಗಳಲ್ಲಿ ಬೆಳೆದ ಬೆಳೆಗಳ ಗುಣಮಟ್ಟ ಕುಸಿತಗೊಂಡಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿಯುವ ಆತಂಕವೂ ವ್ಯಕ್ತವಾಗಿದೆ. ಈಗಾಗಲೇ ಬೇಸಿಗೆ ಬರದಿಂದ ಸಂಕಷ್ಟ ಅನುಭವಿಸುತ್ತಿದ್ದ ರೈತರಿಗೆ ಈ ಅಕಾಲಿಕ ಮಳೆ ಮತ್ತಷ್ಟು ತೊಂದರೆ ತಂದಿದೆ.
ಈ ಹಿನ್ನೆಲೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಬೇಕು ಹಾಗೂ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಸರ್ಕಾರವು ಶೀಘ್ರ ಪರಿಹಾರ ಘೋಷಿಸಿ ರೈತರ ನೆರವಿಗೆ ಬರಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.



