ಬೆಳಗಾವಿ: ಮನೆಯಲ್ಲಿ ಪತ್ನಿ ಸೀರೆ ಬದಲು ನೈಟಿ ಹಾಕಿಕೊಳ್ತಿದ್ಲು ಎಂದು ಆಕೆಗೆ ಬೆಂಕಿ ಹಚ್ಚಿ ಭಾಯಾನಕ ಘಟನೆ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ.
ಗಂಡ ಹೆಂಡತಿ ಎಂದರೆ ಇಬ್ಬರ ನಡುವೆ ಸಾವಿರ ಸಮಸ್ಯೆಗಳಿರುವುದು ಸಹಜ. ಆದರೆ ಕೆಲವರು ಕೋಪದ ಕೈಗೆ ಬುದ್ಧಿಕೊಟ್ಟು ಆತುರದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇತ್ತೀಚಿಗೆ ಅನೈತಿಕ ಸಂಬಂಧದ ವಿಚಾರಕ್ಕೆ ಸಂಸಾರದಲ್ಲಿ ಬಿರುಕುಂಟಾಗಿ, ಕೊನೆಗೆ ಕೊಲೆಯಲ್ಲಿ ಅಂತ್ಯವಾಗುವ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ ಇಲ್ಲೊಬ್ಬ , ಮನೆಯಲ್ಲಿ ಸೀರೆ ಉಡದೆ ನೈಟಿ ಹಾಕುತ್ತಿದ್ದಳು ಎಂಬ ವಿಚಾರಕ್ಕೆ ರೊಚ್ಚಿಗೆದ್ದು ಪತ್ನಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಮಂಜುಳಾ ಪಾಟೀಲ್ ಮತ್ತು ಕೃಷ್ಣಾಜಿ ಪಾಟೀಲ್ ದಂಪತಿ ಎಂಟು ವರ್ಷಗಳ ಹಿಂದೆ ವಿವಾಹವಾಗಿದ್ದರು. ಮನೆಯಲ್ಲಿ ಪತ್ನಿ ಸೀರೆ ಬದಲು ನೈಟಿ ಅಥವಾ ಗೌನ್ ಧರಿಸುತ್ತಿದ್ದಳು. ಇದೇ ವಿಚಾರಕ್ಕೆ ಮನೆಯಲ್ಲಿ ಆಗಾಗ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಇದೇ ವಿಚಾರವಾಗಿ ಮತ್ತೊಮ್ಮೆ ವಾಗ್ವಾದ ಉಂಟಾಗಿ, ಅದು ಅತಿರೇಕಕ್ಕೆ ತಲುಪಿ ಪತಿ ಕೃಷ್ಣಾಜಿ, ಮಂಜುಳಾಗೆ ಬೆಂಕಿ ಹಚ್ಚಿದ್ದಾನೆ ಎಂದು ಆರೋಪ ಕೇಲಿಬಂದಿದೆ.
ಘಟನೆಯಿಂದ ಮಂಜುಳಾ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯ ದೇಹದ ಶೇ80ರಷ್ಟು ಭಾಗ ಸುಟ್ಟಿದೆ. ಗಂಭೀರ ಗಾಯಗಳಿಂದ ಬಳಲಿದ ಆಕೆಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಗೋವಾಕ್ಕೆ ಸ್ಥಳಾಂತರಿಸಲಾಗಿದೆ.
ಮನೆಯಲ್ಲಿ ಗಲಾಟೆಯ ಶಬ್ದ ಕೇಳಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಂದಗಡ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ.



