Saturday, July 4, 2026
Google search engine

Homeಸ್ಥಳೀಯಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಧ್ಯಸ್ಥಿಕೆ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಧ್ಯಸ್ಥಿಕೆ ಕೇಂದ್ರದ ನೂತನ ಕಟ್ಟಡ ಉದ್ಘಾಟನೆ

ಮೈಸೂರು : ಜಿಲ್ಲಾಡಳಿತ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ, ಮೈಸೂರು ಮತ್ತು ಜಿಲ್ಲಾ ನ್ಯಾಯವಾದಿಗಳ ಸಂಘ, ಮೈಸೂರು. ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಮೈಸೂರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮಧ್ಯಸ್ಥಿಕೆ ಕೇಂದ್ರದ ನೂತನ ಕಟ್ಟಡವನ್ನು ಕರ್ನಾಟಕ ಉಚ್ಛ ನ್ಯಾಯಾಲಯ ಹಾಗೂ ಆಡಳಿತಾತ್ಮಕ ನ್ಯಾಯಮೂರ್ತಿ ಎಸ್.ಜಿ ಪಂಡಿತ್ ಅವರು ಉದ್ಘಾಟಿಸಿದರು.

ನ್ಯಾಯಮೂರ್ತಿ ಎಸ್. ಜಿ. ಪಂಡಿತ್ ಅವರು ಮಾತನಾಡಿ ಸಂಧಾನ ಅಥವಾ ಮಧ್ಯಸ್ಥಿಕೆ ಎಂಬುದು ನಮ್ಮ ದೇಶಕ್ಕೆ ಹೊಸದೇನಲ್ಲ. ಮಹಾಭಾರತದ ಕಾಲದ ಕೃಷ್ಣ ಸಂಧಾನದ ದಿನಗಳಿಂದಲೂ ನಮ್ಮ ಸಂಸ್ಕೃತಿಯಲ್ಲಿ ಈ ಪದ್ಧತಿಯನ್ನು ನಾವು ಅಳವಡಿಸಿಕೊಂಡು ಬಂದಿದ್ದೇವೆ ಎಂದು ಹೇಳಿದರು.

ಇಂದು ನ್ಯಾಯಾಲಯಗಳ ಮೇಲೆ ಎಷ್ಟೊಂದು ಒತ್ತಡವಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಸಂಧಾನ ಅಥವಾ ಮಧ್ಯಸ್ಥಿಕೆ ಕೇಂದ್ರಗಳು ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸುವ ಮೂಲಕ ತ್ವರಿತ ನ್ಯಾಯದಾನಕ್ಕೆ ಪ್ರಮುಖ ದಾರಿಯಾಗಲಿವೆ ಎಂದರು.

ಯಾವುದೇ ಕಕ್ಷಿದಾರರು ಆರಂಭದಲ್ಲಿ ತಮ್ಮ ವಕೀಲರು ಹೇಳಿದಂತೆ ಕೇಳುವ ಪರಿಸ್ಥಿತಿಯಲ್ಲಿರುತ್ತಾರೆ ಮತ್ತು ವಕೀಲರನ್ನೇ ದೇವರೆಂದು ಭಾವಿಸುತ್ತಾರೆ.ಗ್ರಾಹಕರ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ, ವಕೀಲರು ಕಕ್ಷಿದಾರರ ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಅವರಿಗೆ ಮೊದಲ ಆದ್ಯತೆಯಾಗಿ ಮಧ್ಯಸ್ಥಿಕೆ ಅಥವಾ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಳ್ಳಲು ಎಂದು ತಿಳಿಸಿದರು.

ಸಂಧಾನದಿಂದ ಪ್ರಕರಣಗಳು ಎಷ್ಟು ಬೇಗ ತೀರ್ಮಾನವಾಗುತ್ತವೆ ಮತ್ತು ಇದರಿಂದ ಅವರಿಗೆ ಏನೆಲ್ಲಾ ಉಪಯೋಗಗಳಿವೆ ಎಂಬುದನ್ನು ವಕೀಲರು ಮನವರಿಕೆ ಮಾಡಿಕೊಟ್ಟರೆ, ಕಕ್ಷಿದಾರರು ಖಂಡಿತ ಒಪ್ಪಿಕೊಳ್ಳುತ್ತಾರೆ ಹಾಗೂ ಪರಿಹಾರ ಸುಲಭವಾಗುತ್ತದೆ ಎಂದು ಹೇಳಿದರು.

ಮೈಸೂರಿನಲ್ಲಿ ಈಗ ಸುಸಜ್ಜಿತವಾದ ನೂತನ ಮಧ್ಯಸ್ಥಿಕೆ ಕೇಂದ್ರ ಉದ್ಘಾಟನೆಯಾಗಿದೆ. ಸಾರ್ವಜನಿಕರು ಹಾಗೂ ನ್ಯಾಯವಾದಿಗಳು ಈ ಕೇಂದ್ರದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ನ್ಯಾಯಮೂರ್ತಿಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಟಿ.ಜಿ.ಶಿವಶಂಕರೇಗೌಡ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಉಷಾರಾಣಿ,ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ರಿಜಿಸ್ಟ್ರಾರ್ ಮತ್ತು ಆಡಳಿತಾಧಿಕಾರಿಗಳಾದ ಮಲ್ಲಿಕಾರ್ಜುನ ಈಶ್ವರಪ್ಪ ಕಮತಗಿ,ಜಿಲ್ಲಾಡಳಿತದ ಅಧಿಕಾರಿಗಳು, ಗ್ರಾಹಕ ಆಯೋಗದ ಪದಾಧಿಕಾರಿಗಳು ಹಾಗೂ ಮೈಸೂರು ಜಿಲ್ಲಾ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಮತ್ತು ವಕೀಲರು ಉಪಸ್ಥಿತರಿದ್ದರು

RELATED ARTICLES
- Advertisment -
Google search engine

Most Popular