ನವದೆಹಲಿ : ಮುಂಬರುವ FIH ಹಾಕಿ ಮಹಿಳಾ ನೇಷನ್ಸ್ ಕಪ್ ನ್ಯೂಜಿಲೆಂಡ್ 2025-26 ಕ್ಕೆ ತಯಾರಿ ನಡೆಸಲು ಭಾರತೀಯ ಮಹಿಳಾ ಹಾಕಿ ತಂಡವು ಮೇ 21 ರಿಂದ ಜೂನ್ 3 ರವರೆಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಈ ಪ್ರತಿಷ್ಠಿತ ನೇಷನ್ಸ್ ಕಪ್ ಪಂದ್ಯಾವಳಿಯು ಜೂನ್ 15 ರಿಂದ 21 ರವರೆಗೆ ಆಕ್ಲೆಂಡ್‌ನಲ್ಲಿ ನಡೆಯಲಿದೆ.
ಹಾಕಿ ಇಂಡಿಯಾ ಪ್ರಕಟಿಸಿರುವ ವೇಳಾಪಟ್ಟಿಯಂತೆ, ಭಾರತೀಯ ತಂಡವು ಮೇ 26 ರಿಂದ 30 ರವರೆಗೆ ಪರ್ತ್ ಹಾಕಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಪಂದ್ಯಗಳನ್ನು ಆಡಲಿದೆ.
ಮೊದಲ ಎರಡು ಪಂದ್ಯಗಳು: ಮೇ 26 ಮತ್ತು 27, ಉಳಿದ ಎರಡು ಪಂದ್ಯಗಳು: ಮೇ 29 ಮತ್ತು 30ರಂದು ನಡೆಯಲಿದೆ.
ಆಸ್ಟ್ರೇಲಿಯಾ ಪ್ರವಾಸದ ನಂತರ, ತಂಡವು ನ್ಯೂಜಿಲೆಂಡ್‌ಗೆ ತೆರಳಲಿದ್ದು, ಅಲ್ಲಿ ನೇಷನ್ಸ್ ಕಪ್‌ಗೂ ಮುನ್ನ ಕೆಲವು ಅಭ್ಯಾಸ ಪಂದ್ಯಗಳನ್ನು ಆಡಲಿದೆ.
ತಂಡದ ತಯಾರಿ ಮತ್ತು ವಿಶೇಷ ತರಬೇತಿ
ವರ್ಷದ ಆರಂಭದಲ್ಲಿ ಭಾರತ ತಂಡ ಅರ್ಜೆಂಟೀನಾ ಪ್ರವಾಸ ಕೈಗೊಂಡಿತ್ತು. ಅಲ್ಲಿ ಆಡಿದ 4 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಸ್ಮರಣೀಯ ಪ್ರದರ್ಶನ ನೀಡಿತ್ತು. ಪ್ರಸ್ತುತ ತಂಡವು ಬೆಂಗಳೂರಿನ ಸಾಯ್ (SAI) ಕೇಂದ್ರದಲ್ಲಿ ಕಠಿಣ ತರಬೇತಿ ಪಡೆಯುತ್ತಿದ್ದು, ತನ್ನ ದೌರ್ಬಲ್ಯಗಳನ್ನು ಸರಿಪಡಿಸಿಕೊಳ್ಳುವತ್ತ ಗಮನ ಹರಿಸಿದೆ.
ವಿಶೇಷವೆಂದರೆ, ಆನಂದನಾ (ಕೋಕಾ-ಕೋಲಾ ಇಂಡಿಯಾ ಫೌಂಡೇಶನ್) ಬೆಂಬಲದೊಂದಿಗೆ, ತಂಡದ ಡ್ರ್ಯಾಗ್-ಫ್ಲಿಕ್ಕರ್‌ಗಳು ಮೇ 26 ರಿಂದ ಜೂನ್ 21 ರವರೆಗೆ ಪರ್ತ್ ಮತ್ತು ಆಕ್ಲೆಂಡ್‌ನಲ್ಲಿ ಡಚ್ ದಿಗ್ಗಜ ತಾಕೆ ತಾಕೆಮಾ ಅವರ ಮಾರ್ಗದರ್ಶನದಲ್ಲಿ ವಿಶೇಷ ತರಬೇತಿ ಶಿಬಿರದಲ್ಲಿ ಭಾಗವಹಿಸಲಿದ್ದಾರೆ.
ತಂಡದ ಮುಖ್ಯ ಕೋಚ್ ಶೋರ್ಡ್ ಮರಿನ್ ಈ ಪ್ರವಾಸದ ಬಗ್ಗೆ ಸಂತಸ ವ್ಯಕ್ತಪಡಿಸಿ, “ಹಾಕಿ ಇಂಡಿಯಾದ ಪ್ರಯತ್ನದಿಂದ ಈ ಪ್ರವಾಸ ಸಾಧ್ಯವಾಗಿದೆ. ಇದು ನಮ್ಮ ಸುಧಾರಣೆಗಳನ್ನು ಪರೀಕ್ಷಿಸಲು ಮತ್ತು ನ್ಯೂಜಿಲೆಂಡ್‌ನ ವಾತಾವರಣಕ್ಕೆ ಹೊಂದಿಕೊಳ್ಳಲು ಸಹಕಾರಿಯಾಗಲಿದೆ. ಅರ್ಜೆಂಟೀನಾ ವಿರುದ್ಧದ ಗೆಲುವಿನ ಲಯವನ್ನು ಕಾಯ್ದುಕೊಳ್ಳುವುದು ನಮ್ಮ ಗುರಿ” ನ್ಯೂಜಿಲೆಂಡ್‌ನ ಚಳಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಆಸ್ಟ್ರೇಲಿಯಾ ಪ್ರವಾಸವು ತಂಡಕ್ಕೆ ಉತ್ತಮ ತಾಲೀಮಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸಿಸ್)



