ಮಾನವ ನಾಗರಿಕತೆಯ ಆದಿಮ ಪ್ರಜ್ಞೆಯಲ್ಲಿ ಮೊದಲು ಮೂಡಿಬಂದ ಕಲೆ ಎಂದರೆ ಅದು ನೃತ್ಯ. ಶಬ್ದಗಳು ಹುಟ್ಟುವ ಮುನ್ನವೇ ಭಾವನೆಗಳಿದ್ದವು, ಭಾಷೆಯ ವ್ಯಾಕರಣಕ್ಕೂ ಮುನ್ನ ಲಯವಿತ್ತು. ಆ ಅಭಿವ್ಯಕ್ತಿಯೇ ನೃತ್ಯದ ರೂಪದಲ್ಲಿ ಪ್ರಕಟವಾಯಿತು. ನೃತ್ಯವು ಕೇವಲ ದೇಹದ ಚಲನೆಯಲ್ಲ, ಅದು ಆತ್ಮದ ಸ್ಪಂದನ. ಇದು ಭಾಷೆ ಮತ್ತು ಗಡಿಗಳನ್ನು ಮೀರಿ ಹೃದಯಗಳನ್ನು ಬೆಸೆಯುವ ಮೌನ ಭಾಷೆಯಾಗಿದೆ.
ಸ್ಥಾಪನೆ ಮತ್ತು ಐತಿಹಾಸಿಕ ಹಿನ್ನೆಲೆ
ಯುನೆಸ್ಕೋದ ಅಂಗಸಂಸ್ಥೆಯಾದ International Theatre Institute (ITI) ನೃತ್ಯ ಸಮಿತಿಯು 1982ರಲ್ಲಿ ಅಂತರರಾಷ್ಟ್ರೀಯ ನೃತ್ಯ ದಿನವನ್ನು ಸ್ಥಾಪಿಸಿತು. ಆಧುನಿಕ ಬ್ಯಾಲೆ ನೃತ್ಯದ ಪಿತಾಮಹ ಎಂದು ಕರೆಯಲ್ಪಡುವ ಫ್ರೆಂಚ್ ನೃತ್ಯಗಾರ ಜೀನ್-ಜಾರ್ಜ್ ನೋವ್ರೆ (Jean-Georges Noverre) ಅವರ ಜನ್ಮದಿನದ ನೆನಪಿಗಾಗಿ ಪ್ರತಿ ವರ್ಷ ಏಪ್ರಿಲ್ 29 ರಂದು ಈ ದಿನವನ್ನು ಆಚರಿಸಲಾಗುತ್ತದೆ. ನೃತ್ಯವನ್ನು ಕೇವಲ ತಾಂತ್ರಿಕ ಕೌಶಲಕ್ಕೆ ಸೀಮಿತಗೊಳಿಸದೆ, ಅದನ್ನು ಭಾವನಾತ್ಮಕ ಅಭಿವ್ಯಕ್ತಿಯ ಮಾಧ್ಯಮವನ್ನಾಗಿ ಮಾಡುವುದು ಇದರ ಉದ್ದೇಶವಾಗಿದೆ.
ನೃತ್ಯದಲ್ಲಿ ಪುರುಷಾರ್ಥಗಳ ಪರಿಕಲ್ಪನೆ
ಭಾರತೀಯ ದರ್ಶನದ ಪ್ರಕಾರ, ನೃತ್ಯವು ಜೀವನದ ನಾಲ್ಕು ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷಗಳೊಂದಿಗೆ ಸಂಬಂಧ ಹೊಂದಿದೆ.
ಅರ್ಥ: ನೃತ್ಯದ ಮೂಲಕ ಕಲಾವಿದರು ಗೌರವ ಮತ್ತು ಜೀವನೋಪಾಯವನ್ನು ಕಂಡುಕೊಳ್ಳುತ್ತಾರೆ.
ಕಾಮ: ನೃತ್ಯದಲ್ಲಿನ ಶೃಂಗಾರ, ಪ್ರೇಮ ಮತ್ತು ಆನಂದದ ಮೂಲಕ ಸೌಂದರ್ಯದ ಅನುಭೂತಿ ಸಿಗುತ್ತದೆ.
ಮೋಕ್ಷ: ನೃತ್ಯವು ಈಶ್ವರನ ಆರಾಧನೆಯ ಒಂದು ರೂಪ. ನೃತ್ಯದಲ್ಲಿ ತಲ್ಲೀನನಾದ ಕಲಾವಿದ ಅಹಂಕಾರ ಮತ್ತು ಲೌಕಿಕ ಬಂಧನಗಳಿಂದ ಮುಕ್ತನಾಗಿ ಪರಮಾತ್ಮನ ಸಾಕ್ಷಾತ್ಕಾರ ಪಡೆಯುತ್ತಾನೆ.
ನೃತ್ಯ ಆತ್ಮದ ಮೌನ ಕವಿತೆ
ನೃತ್ಯವನ್ನು “ಮೌನ ಕವಿತೆ” ಎಂದು ಕರೆಯಲಾಗುತ್ತದೆ. ಎಲ್ಲಿ ಶಬ್ದಗಳು ಮೌನವಾಗುತ್ತವೆಯೋ ಅಲ್ಲಿ ನೃತ್ಯವು ಸಂವೇದನೆಗಳನ್ನು ಅಭಿವ್ಯಕ್ತಿಸುತ್ತದೆ. ಇದು ವ್ಯಕ್ತಿಯನ್ನು ತನ್ನ ಅಂತರಾತ್ಮದೊಂದಿಗೆ ಜೋಡಿಸುವ ಸೇತುವೆಯಾಗಿದೆ.
ಭಾರತೀಯ ದರ್ಶನದಲ್ಲಿ ಆಧ್ಯಾತ್ಮಿಕ ಸ್ವರೂಪ
ಭಾರತೀಯ ಸಂಸ್ಕೃತಿಯಲ್ಲಿ ನೃತ್ಯವು ಅತ್ಯಂತ ಪವಿತ್ರವಾದುದು. ಶಿವನ ನಟರಾಜ ರೂಪದ ತಾಂಡವವು ಸೃಷ್ಟಿ, ಸ್ಥಿತಿ ಮತ್ತು ಲಯದ ಸಂಕೇತವಾದರೆ, ಪಾರ್ವತಿಯ ಲಾಸ್ಯವು ಸೌಂದರ್ಯ ಮತ್ತು ಕರುಣೆಯ ಸಂಕೇತವಾಗಿದೆ. ಮೀರಾ ಬಾಯಿ, ಚೈತನ್ಯ ಮಹಾಪ್ರಭುಗಳಂತಹ ಸಂತರು ನೃತ್ಯವನ್ನು ಭಕ್ತಿಯ ಪರಮೋಚ್ಛ ಸ್ಥಿತಿಯನ್ನಾಗಿ ಬಳಸಿಕೊಂಡಿದ್ದಾರೆ.
ಭಾರತೀಯ ನೃತ್ಯ ಪರಂಪರೆ
ಶಾಸ್ತ್ರೀಯ ನೃತ್ಯಗಳು: ಭರತನಾಟ್ಯ, ಕಥಕ್, ಒಡಿಸ್ಸಿ, ಕೂಚಿಪುಡಿ, ಕಥಕ್ಕಳಿ, ಮಣಿಪುರಿ, ಮೋಹಿನಿ ಅಟ್ಟಂ ಯಕ್ಷಗಾನ ಇವು ಭಾರತದ ಪುರಾಣ ಮತ್ತು ದರ್ಶನಗಳನ್ನು ಜೀವಂತವಾಗಿರಿಸಿವೆ.
ಜಾನಪದ ನೃತ್ಯಗಳು: ಭಾಂಗ್ರಾ, ಗರ್ಬಾ, ಘೂಮರ್, ಬಿಹು ಮುಂತಾದ ನೃತ್ಯಗಳು ಆಯಾ ಮಣ್ಣಿನ ಸುಗಂಧ, ಶ್ರಮ ಮತ್ತು ಸಾಮೂಹಿಕ ಆನಂದವನ್ನು ಬಿಂಬಿಸುತ್ತವೆ.
ಆರೋಗ್ಯ ಮತ್ತು ಆಧುನಿಕ ಯುಗದಲ್ಲಿ ಪಾತ್ರ
ನೃತ್ಯವು ಕೇವಲ ಕಲೆಯಲ್ಲ, ಅದು ಅತ್ಯುತ್ತಮ ವ್ಯಾಯಾಮವೂ ಹೌದು. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ, ಏಕಾಗ್ರತೆ ಹೆಚ್ಚಿಸುತ್ತದೆ ಮತ್ತು ಆತ್ಮವಿಶ್ವಾಸವನ್ನು ಬೆಳೆಸುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ನೃತ್ಯವು ಕೇವಲ ಹವ್ಯಾಸವಾಗಿ ಉಳಿಯದೆ, ಕೊರಿಯೋಗ್ರಫಿ, ಡ್ಯಾನ್ಸ್ ಥೆರಪಿ ಮತ್ತು ಫಿಟ್‌ನೆಸ್ ಟ್ರೈನಿಂಗ್ ನಂತಹ ಕ್ಷೇತ್ರಗಳಲ್ಲಿ ಒಂದು ಉತ್ತಮ ವೃತ್ತಿಜೀವನದ (Career) ಅವಕಾಶವನ್ನೂ ನೀಡುತ್ತಿದೆ.
ಸಂದೇಶ : ಜೀವನವೇ ಒಂದು ನೃತ್ಯ. ಅದರಲ್ಲಿ ಲಯ, ಚಲನೆ ಮತ್ತು ಬದಲಾವಣೆಗಳಿವೆ. ಈ ಅಂತರರಾಷ್ಟ್ರೀಯ ನೃತ್ಯ ದಿನವು ನಮಗೆ ಏಕತೆ, ಸೌಹಾರ್ದತೆ ಮತ್ತು ಮನುಕುಲವನ್ನು ಬೆಸೆಯುವ ಸಾರ್ವತ್ರಿಕ ಭಾಷೆಯ ಮಹತ್ವವನ್ನು ಸಾರುತ್ತದೆ.
“ಎಲ್ಲಿ ಜೀವನವಿದೆಯೋ ಅಲ್ಲಿ ಲಯವಿದೆ; ಎಲ್ಲಿ ಲಯವಿದೆಯೋ ಅಲ್ಲಿ ನೃತ್ಯವಿದೆ.”



