“ಶ್ರಮವೇ ಸೃಜನಶೀಲತೆಯ ಆದಿ ಸ್ವರ” ಎಂಬ ಮಾತು ಕೇವಲ ಒಂದು ಭಾವನಾತ್ಮಕ ಘೋಷಣೆಯಲ್ಲ, ಬದಲಾಗಿ ಮಾನವ ನಾಗರಿಕತೆಯ ಶಾಶ್ವತ ಸತ್ಯವಾಗಿದೆ. ಆದಿಮಾನವನು ಕಲ್ಲುಗಳನ್ನು ಉಜ್ಜಿ ಉಪಕರಣಗಳನ್ನು ತಯಾರಿಸಿದ ಪ್ರಯತ್ನದಿಂದ ಹಿಡಿದು, ಇಂದಿನ ಮಹಾನಗರಗಳ ಗಗನಚುಂಬಿ ಕಟ್ಟಡಗಳವರೆಗೆ, ಪ್ರತಿಯೊಂದು ಸಾಧನೆಯ ಕೇಂದ್ರದಲ್ಲಿ ಶ್ರಮದ ನಿರಂತರ ಸಾಧನೆಯೇ ಅಡಗಿದೆ. ಇತಿಹಾಸದ ಪುಟಗಳನ್ನು ತಿರುವಿದಾಗ ನಾಗರಿಕತೆಯ ಪ್ರತಿಯೊಂದು ಅಧ್ಯಾಯವೂ ಕಾರ್ಮಿಕರ ಬೆವರು ಮತ್ತು ಪರಿಶ್ರಮದಿಂದಲೇ ಬರೆಯಲ್ಪಟ್ಟಿದೆ ಎಂಬುದು ಸ್ಪಷ್ಟವಾಗುತ್ತದೆ.
ಶ್ರಮವು ಕೇವಲ ಜೀವನೋಪಾಯದ ಮಾರ್ಗವಲ್ಲ, ಅದು ಮನುಷ್ಯನ ಅಸ್ತಿತ್ವದ ಸಾರ್ಥಕ ಅಭಿವ್ಯಕ್ತಿಯಾಗಿದೆ. ಪ್ರಕೃತಿಯ ಕಚ್ಚಾ ಸಂಪನ್ಮೂಲಗಳನ್ನು ಉಪಯುಕ್ತ, ಸುಂದರ ಮತ್ತು ಮೌಲ್ಯಯುತ ರೂಪಕ್ಕೆ ಪರಿವರ್ತಿಸುವ ಸೃಜನಶೀಲ ಶಕ್ತಿ ಇದಾಗಿದೆ. ಕುಂಬಾರನ ಸ್ಪರ್ಶದಿಂದ ಮಣ್ಣು ಮಡಕೆಯ ರೂಪ ಪಡೆದಾಗ, ಅದು ಕೇವಲ ಒಂದು ವಸ್ತುವಾಗಿ ಉಳಿಯುವುದಿಲ್ಲ; ಬದಲಾಗಿ ಶ್ರಮದ ಕಲಾತ್ಮಕತೆ ಮತ್ತು ಸೃಜನಶೀಲತೆಯ ಜೀವಂತ ಸಂಕೇತವಾಗುತ್ತದೆ. ಅದೇ ರೀತಿ ರೈತನ ಪರಿಶ್ರಮವು ಭೂಮಿಯನ್ನು ಅನ್ನಪೂರ್ಣೆಯನ್ನಾಗಿ ಮಾಡುತ್ತದೆ ಮತ್ತು ಕುಶಲಕರ್ಮಿಗಳ ಕೌಶಲ್ಯವು ಸಮಾಜವನ್ನು ಸೌಂದರ್ಯ ಮತ್ತು ಉಪಯುಕ್ತತೆಯಿಂದ ಸಮೃದ್ಧಗೊಳಿಸುತ್ತದೆ.
ದಾರ್ಶನಿಕ ದೃಷ್ಟಿಕೋನದಿಂದಲೂ ಶ್ರಮವು ಮನುಷ್ಯನನ್ನು ಆತ್ಮಸಾಕ್ಷಾತ್ಕಾರದತ್ತ ಮುನ್ನಡೆಸುತ್ತದೆ. “ಕಾಯಕವೇ ಕೈಲಾಸ” ಎಂಬುದು ಭಾರತೀಯ ಜೀವನ ದರ್ಶನದ ಮೂಲ ಮಂತ್ರವಾಗಿದ್ದು, ಇದು ಶ್ರಮದ ಘನತೆ ಮತ್ತು ಅದರ ಆಧ್ಯಾತ್ಮಿಕ ಮಹತ್ವವನ್ನು ಎತ್ತಿ ತೋರಿಸುತ್ತದೆ. ಶ್ರಮದ ಮೂಲಕ ಮನುಷ್ಯ ಸಮಾಜಕ್ಕೆ ತನ್ನ ಕೊಡುಗೆಯನ್ನು ನೀಡುವುದಲ್ಲದೆ, ತನ್ನಲ್ಲಿ ಅಡಗಿರುವ ಸಾಮರ್ಥ್ಯ ಮತ್ತು ಸಾಧ್ಯತೆಗಳನ್ನು ಸಾಕಾರಗೊಳಿಸಿಕೊಳ್ಳುತ್ತಾನೆ. ಸಮಾಜದ ನೈಜ ಅಡಿಪಾಯವು ಶಬ್ದವಿಲ್ಲದೆ ತಮ್ಮ ಶ್ರಮದಿಂದ ಜೀವನದ ಹರಿವನ್ನು ನಿರಂತರವಾಗಿರಿಸುವ ಅಸಂಖ್ಯಾತ ಕಾರ್ಮಿಕರ ಕೈಯಲ್ಲಿದೆ ಎಂಬ ಮೂಲ ಸತ್ಯವನ್ನು ಅಂತರರಾಷ್ಟ್ರೀಯ ಕಾರ್ಮಿಕ ದಿನ ನಮಗೆ ನೆನಪಿಸುತ್ತದೆ.
ಇತಿಹಾಸ: ಸಂಘರ್ಷದಿಂದ ಗೌರವದವರೆಗೆ
ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯ ಇತಿಹಾಸವು ಕೇವಲ ಒಂದು ದಿನಾಂಕದ ಉಲ್ಲೇಖವಲ್ಲ, ಬದಲಾಗಿ ಸಂಘರ್ಷ, ತ್ಯಾಗ ಮತ್ತು ಹಕ್ಕುಗಳ ಪ್ರಾಪ್ತಿಯ ಒಂದು ಸ್ಪೂರ್ತಿದಾಯಕ ಕಥೆಯಾಗಿದೆ. ಇದರ ಆರಂಭವು ಮೇ 1, 1886ರ ಹೇಮಾರ್ಕೆಟ್ ಅಫೇರ್ (Haymarket Affair) ನೊಂದಿಗೆ ಬೆಸೆದುಕೊಂಡಿದೆ, ಇದು ವಿಶ್ವದಾದ್ಯಂತ ಕಾರ್ಮಿಕ ಚಳವಳಿಗಳಿಗೆ ಹೊಸ ದಿಕ್ಕನ್ನು ನೀಡಿತು. ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಕಾರ್ಮಿಕರ ತೀವ್ರ ಶೋಷಣೆಯಾಗುತ್ತಿತ್ತು. ಅವರಿಂದ ದಿನಕ್ಕೆ 12 ರಿಂದ 16 ಗಂಟೆಗಳ ಕಾಲ ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು. ಅವರಿಗೆ ಸರಿಯಾದ ವೇತನವಾಗಲಿ ಅಥವಾ ಸುರಕ್ಷಿತ ಕೆಲಸದ ವಾತಾವರಣವಾಗಲಿ ಇರಲಿಲ್ಲ. ಈ ಅನ್ಯಾಯದ ವಿರುದ್ಧ ಕಾರ್ಮಿಕರು “ಎಂಟು ಗಂಟೆ ಕೆಲಸ, ಎಂಟು ಗಂಟೆ ವಿಶ್ರಾಂತಿ ಮತ್ತು ಎಂಟು ಗಂಟೆ ಮನರಂಜನೆ” ಎಂಬ ನ್ಯಾಯಯುತ ಬೇಡಿಕೆಯೊಂದಿಗೆ ಸಂಘಟಿತ ಹೋರಾಟ ಆರಂಭಿಸಿದರು.
ಈ ಚಳವಳಿಯು ಕ್ರಮೇಣ ವ್ಯಾಪಕವಾಯಿತು ಮತ್ತು ಮೇ 4, 1886 ರಂದು ಚಿಕಾಗೋದ ಹೇಮಾರ್ಕೆಟ್ ಸ್ಕ್ವೇರ್‌ನಲ್ಲಿ ಕಾರ್ಮಿಕರ ನಡುವೆ ಹಿಂಸಾತ್ಮಕ ಘಟನೆ ಸಂಭವಿಸಿತು. ಅನೇಕ ನಿರ್ದೋಷಿಗಳು ಪ್ರಾಣ ಕಳೆದುಕೊಂಡರು, ಆದರೆ ಈ ದುರಂತವು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿತು ಮತ್ತು ಕಾರ್ಮಿಕ ಹಕ್ಕುಗಳ ಬಗ್ಗೆ ಜಾಗತಿಕ ಪ್ರಜ್ಞೆಯನ್ನು ಜಾಗೃತಗೊಳಿಸಿತು. ಇದರ ನಂತರ, 1889 ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಕಾಂಗ್ರೆಸ್‌ನಲ್ಲಿ ಮೇ 1ನ್ನು ‘ಅಂತರರಾಷ್ಟ್ರೀಯ ಕಾರ್ಮಿಕ ದಿನ’ ಎಂದು ಆಚರಿಸಲು ಘೋಷಿಸಲಾಯಿತು. ಅಂದಿನಿಂದ ಈ ದಿನವು ವಿಶ್ವದಾದ್ಯಂತ ಕಾರ್ಮಿಕರ ಹಕ್ಕು, ಗೌರವ ಮತ್ತು ಏಕತೆಯ ಸಂಕೇತವಾಗಿ ಸ್ಥಾಪಿತವಾಗಿದೆ. ಇಂದು ನಾವು ಸುಲಭವಾಗಿ ಪಡೆಯುತ್ತಿರುವ ಹಕ್ಕುಗಳು ಯಾರೋ ನೀಡಿದ ಭಿಕ್ಷೆಯಲ್ಲ, ಬದಲಾಗಿ ಸಂಘರ್ಷ, ಧೈರ್ಯ ಮತ್ತು ತ್ಯಾಗದ ಅಮೂಲ್ಯ ಪರಂಪರೆಯಾಗಿದೆ ಎಂದು ಇತಿಹಾಸ ನಮಗೆ ಕಲಿಸುತ್ತದೆ.
ಭಾರತದಲ್ಲಿ ಕಾರ್ಮಿಕ ಚಳವಳಿ: ವಸಾಹತುಶಾಹಿ ಪ್ರಜ್ಞೆಯಿಂದ ಆಧುನಿಕ ಅಭಿವೃದ್ಧಿಯವರೆಗೆ
ಭಾರತದಲ್ಲಿ ಕಾರ್ಮಿಕ ಚಳವಳಿಯ ಬೇರುಗಳು ವಸಾಹತುಶಾಹಿ ಕಾಲದಲ್ಲೇ ಬೆಳೆಯತೊಡಗಿದ್ದವು. ಕಾರ್ಮಿಕರು ಅತ್ಯಂತ ಕಠಿಣ ಮತ್ತು ಶೋಷಣೆಯ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದರು. 1920 ರಲ್ಲಿ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್ (AITUC) ಸ್ಥಾಪನೆಯು ಒಂದು ಪ್ರಮುಖ ಮೈಲಿಗಲ್ಲಾಯಿತು. ಈ ಸಂಘಟನೆಯು ಕಾರ್ಮಿಕರನ್ನು ಒಗ್ಗೂಡಿಸಿ ಅವರ ಹಕ್ಕುಗಳಿಗಾಗಿ ಹೋರಾಡಿತು. ಭಾರತದಲ್ಲಿ ಮೊದಲ ಬಾರಿಗೆ ಮೇ 1, 1923 ರಂದು ಮದ್ರಾಸ್‌ನಲ್ಲಿ (ಈಗಿನ ಚೆನ್ನೈ) ಕಾರ್ಮಿಕ ದಿನವನ್ನು ಆಚರಿಸಲಾಯಿತು. ಲೇಬರ್ ಕಿಸಾನ್ ಪಾರ್ಟಿ ಆಫ್ ಹಿಂದೂಸ್ತಾನ್ ಇದನ್ನು ಆಯೋಜಿಸಿತ್ತು.
ಸ್ವಾತಂತ್ರ್ಯದ ನಂತರ, ಭಾರತದ ಸಂವಿಧಾನವು ಕಾರ್ಮಿಕರ ಹಕ್ಕುಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಿತು. ಕನಿಷ್ಠ ವೇತನ ಕಾಯ್ದೆ (1948), ಕೈಗಾರಿಕಾ ವಿವಾದಗಳ ಕಾಯ್ದೆ (1947) ನಂತಹ ಕಾನೂನುಗಳು ಕಾರ್ಮಿಕರ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಸರ್ಕಾರವು ಕಾರ್ಮಿಕ ಕಾನೂನುಗಳನ್ನು ಸರಳಗೊಳಿಸಲು ಕಾರ್ಮಿಕ ಸಂಹಿತೆಗಳನ್ನು (Labour Codes) ಜಾರಿಗೆ ತರುವತ್ತ ಹೆಜ್ಜೆ ಇಟ್ಟಿದೆ. ಆದಾಗ್ಯೂ, ಭಾರತದ ಸುಮಾರು 90% ಕಾರ್ಮಿಕರು ಅಸಂಘಟಿತ ವಲಯದಲ್ಲಿದ್ದಾರೆ ಎಂಬುದು ಇಂದಿಗೂ ಒಂದು ದೊಡ್ಡ ಸವಾಲಾಗಿದೆ.
ಪ್ರಸ್ತುತ ಸನ್ನಿವೇಶ : ಅಭಿವೃದ್ಧಿಯ ನಡುವೆ ಅಸಮಾನತೆ
ಜಾಗತೀಕರಣ ಮತ್ತು ತಾಂತ್ರಿಕ ಪ್ರಗತಿಯು ಶ್ರಮದ ಸ್ವರೂಪವನ್ನು ಬದಲಿಸಿದೆ. ಇದರೊಂದಿಗೆ ಹೊಸ ಸವಾಲುಗಳೂ ಎದುರಾಗಿವೆ.
ಅಸಂಘಟಿತ ವಲಯದ ಅಭದ್ರತೆ : ಕಟ್ಟಡ ನಿರ್ಮಾಣ, ಕೃಷಿ ಮತ್ತು ಸಣ್ಣ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರಿಗೆ ಉದ್ಯೋಗ ಸ್ಥಿರತೆ ಅಥವಾ ಸಾಮಾಜಿಕ ಭದ್ರತೆಯ ಕೊರತೆಯಿದೆ.
ವಲಸೆ ಕಾರ್ಮಿಕರ ಸಮಸ್ಯೆ : ಉತ್ತಮ ಜೀವನಕ್ಕಾಗಿ ನಗರಗಳಿಗೆ ವಲಸೆ ಬರುವ ಕಾರ್ಮಿಕರು ವಸತಿ ಮತ್ತು ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಾರೆ.
ತಾಂತ್ರಿಕ ಬದಲಾವಣೆ : ಕೃತಕ ಬುದ್ಧಿಮತ್ತೆ (AI) ಮತ್ತು ಆಟೊಮೇಷನ್ ಹಳೆಯ ಉದ್ಯೋಗಗಳನ್ನು ಕಿತ್ತುಕೊಳ್ಳುತ್ತಿವೆ, ಇದಕ್ಕೆ ಹೊಸ ಕೌಶಲ್ಯಗಳ ಅವಶ್ಯಕತೆಯಿದೆ.
ಗಿಗ್ ಎಕಾನಮಿ (Gig Economy): ಡಿಲಿವರಿ ಏಜೆಂಟ್‌ಗಳು ಮತ್ತು ಫ್ರೀಲ್ಯಾನ್ಸರ್‌ಗಳಿಗೆ ಕೆಲಸದ ಸ್ವಾತಂತ್ರ್ಯವಿದ್ದರೂ, ಅವರಿಗೆ ಸಾಮಾಜಿಕ ಭದ್ರತೆ ಮತ್ತು ವಿಮೆಯ ಸೌಲಭ್ಯಗಳು ಸಿಗುತ್ತಿಲ್ಲ.
ಕೋವಿಡ್-19 ಸಾಂಕ್ರಾಮಿಕ : ಕಾರ್ಮಿಕರ ನೋವಿನ ಕನ್ನಡಿ
ಕೋವಿಡ್-19 ಸಾಂಕ್ರಾಮಿಕವು ಕಾರ್ಮಿಕ ವರ್ಗದ ವಾಸ್ತವ ಸ್ಥಿತಿಯನ್ನು ಜಗತ್ತಿಗೆ ತೋರಿಸಿತು. ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರ ಪಲಾಯನವು ನಮ್ಮ ಅಭಿವೃದ್ಧಿ ಮಾದರಿಯ ದೌರ್ಬಲ್ಯಗಳನ್ನು ಎತ್ತಿ ತೋರಿಸಿತು. ಇದು ಕಾರ್ಮಿಕರಿಗಾಗಿ ಬಲವಾದ ಸಾಮಾಜಿಕ ಭದ್ರತಾ ವ್ಯವಸ್ಥೆಯ ಅಗತ್ಯವನ್ನು ನಮಗೆ ಮನವರಿಕೆ ಮಾಡಿಕೊಟ್ಟಿತು.
ಮುಂದಿನ ದಿನಗಳಲ್ಲಿ ಕಾರ್ಮಿಕರ ಸಬಲೀಕರಣಕ್ಕಾಗಿ ಸಾಮಾಜಿಕ ಭದ್ರತೆಯ ವಿಸ್ತರಣೆ: ಆರೋಗ್ಯ ವಿಮೆ, ಪಿಂಚಣಿ ಮತ್ತು ಕನಿಷ್ಠ ಆದಾಯದ ಗ್ಯಾರಂಟಿ. ಕೌಶಲ್ಯ ಅಭಿವೃದ್ಧಿ: ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಅನುಗುಣವಾಗಿ ತರಬೇತಿ. ಮಹಿಳಾ ಕಾರ್ಮಿಕರ ಸಬಲೀಕರಣ: ಸಮಾನ ವೇತನ ಮತ್ತು ಸುರಕ್ಷಿತ ಕೆಲಸದ ವಾತಾವರಣ. ಕಾರ್ಮಿಕ ಕಾನೂನುಗಳ ಪರಿಣಾಮಕಾರಿ ಜಾರಿ: ಹೊಸ ಕಾನೂನುಗಳು ಕೇವಲ ಕಾಗದದ ಮೇಲೆ ಉಳಿಯದೆ ಜಾರಿಗೆ ಬರಬೇಕು.
ಶ್ರಮದ ಗೌರವವೇ ನಿಜವಾದ ಪ್ರಗತಿ
ಅಂತರರಾಷ್ಟ್ರೀಯ ಕಾರ್ಮಿಕ ದಿನಾಚರಣೆಯು ಕಾರ್ಮಿಕರು ಗೌರವ, ಸುರಕ್ಷತೆ ಮತ್ತು ಹಕ್ಕುಗಳೊಂದಿಗೆ ಬದುಕಿದಾಗ ಮಾತ್ರ ಸಮಾಜದ ನಿಜವಾದ ಪ್ರಗತಿ ಸಾಧ್ಯ ಎಂಬ ಸಂದೇಶವನ್ನು ನೀಡುತ್ತದೆ. ಕಾರ್ಮಿಕರು ಕೇವಲ ಉತ್ಪಾದನಾ ಪ್ರಕ್ರಿಯೆಯ ಸಾಧನಗಳಲ್ಲ; ಅವರು ರಾಷ್ಟ್ರ ನಿರ್ಮಾಣದ ಅಡಿಪಾಯ.
“ಶ್ರಮದ ಗೌರವವೇ ಮಾನವೀಯತೆಯ ಗೌರವ, ಮತ್ತು ಇದೇ ನಿಜವಾದ ಅಭಿವೃದ್ಧಿಯ ಹಾದಿ.”
ಯಾರೋ ಪುಣ್ಯಾತ್ಮರು ಹೇಳಿದಂತೆ “ಕೈಗಳಲ್ಲಿ ಗುಳ್ಳೆಗಳಿವೆ (ಬೊಬ್ಬೆಗಳಿವೆ), ಆದರೆ ಹಣೆಯ ಮೇಲೆ ಹೆಮ್ಮೆಯ ಗೆರೆಯಿದೆ, ಇದೇ ಆಧುನಿಕ ಯುಗದ ನಿಜವಾದ ಗುರುತು.”



