ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದ ಘಾಟ್ ರಸ್ತೆಯಲ್ಲಿ ಭೀಕರ ಬಸ್ ಅಪಘಾತ ಸಂಭವಿಸಿದ್ದು, ಬುದ್ಧ ಪೂರ್ಣಿಮೆಯ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರನ ದರ್ಶನ ಪಡೆದು ಮರಳುತ್ತಿದ್ದ ಭಕ್ತರಿದ್ದ ಬಸ್ ಉರುಳಿ ಪಲ್ಟಿಯಾಗಿದೆ. ಈ ಅಪಘಾತದಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಮೈಸೂರು ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್, ಮಹದೇಶ್ವರ ಬೆಟ್ಟದಿಂದ ಮೈಸೂರಿಗೆ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತು ಸಾಗುತ್ತಿತ್ತು. ಈ ವೇಳೆ ಮಹದೇಶ್ವರ ಬೆಟ್ಟ ಹಾಗೂ ತಾಳಬೆಟ್ಟದ ನಡುವೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆಯಲ್ಲೇ ಪಲ್ಟಿಯಾಗಿದೆ.
ಅಪಘಾತದಲ್ಲಿ ಗಾಯಗೊಂಡ 20ಕ್ಕೂ ಹೆಚ್ಚು ಪ್ರಯಾಣಿಕರನ್ನು ತಕ್ಷಣವೇ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಘಾಟ್ ರಸ್ತೆಯ ಮಧ್ಯದಲ್ಲೇ ಬಸ್ ಪಲ್ಟಿಯಾಗಿದ್ದರಿಂದ ಮಹದೇಶ್ವರ ಬೆಟ್ಟಕ್ಕೆ ಬರುವ ಮತ್ತು ಹೋಗುವ ವಾಹನಗಳ ಸಂಚಾರದಲ್ಲಿ ಭಾರಿ ವ್ಯತ್ಯಯ ಉಂಟಾಗಿತ್ತು. ಬುದ್ಧ ಪೂರ್ಣಿಮೆಯ ಕಾರಣ ಸಾವಿರಾರು ಭಕ್ತರು ಬೆಟ್ಟಕ್ಕೆ ಆಗಮಿಸುತ್ತಿದ್ದರಿಂದ ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.



