ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಮರುಪರಿಶೀಲಿಸಲು ಸರ್ಕಾರ ಮುಂದಾಗಿದ್ದು, ನಿನ್ನೆ ನಡೆದ ಎಸ್‌ಐಆರ್ ಸಭೆಯಲ್ಲಿ ಈ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಅದರಂತೆ ಅನರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ಕೈಬಿಡುವ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎನ್ನಲಾಗಿದೆ.
ಯೋಜನೆಗಳ ಲಾಭ ನಿಜವಾದ ಅರ್ಹ ಬಡ ಕುಟುಂಬಗಳಿಗೆ ಮಾತ್ರ ತಲುಪಬೇಕು ಹಾಗೂ ಸರ್ಕಾರದ ಹಣ ದುರುಪಯೋಗವಾಗಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದ್ದು, ಗೃಹಲಕ್ಷ್ಮಿ ಯೋಜನೆಯಡಿ ಮೃತಪಟ್ಟವರ ಹೆಸರಿನಲ್ಲಿಯೂ ಹಣ ಜಮೆಯಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಪ್ರಸ್ತುತ ರಾಜ್ಯದಲ್ಲಿ 1.24 ಕೋಟಿಗೂ ಹೆಚ್ಚು ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಪಟ್ಟಿಯಲ್ಲಿ ತಾಂತ್ರಿಕ ದೋಷಗಳು ಮತ್ತು ನಿಯಮ ಉಲ್ಲಂಘನೆಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ತೆರಿಗೆ ಪಾವತಿಸುವವರೂ ಯೋಜನೆ ಲಾಭ ಪಡೆಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಅವರನ್ನು ಯೋಜನೆಯ ವ್ಯಾಪ್ತಿಯಿಂದ ಹೊರಗಿಡುವ ಬಗ್ಗೆ ಚಿಂತನೆ ನಡೆದಿದೆ.
ಇದಲ್ಲದೆ, ಒಂದೇ ಮನೆಯ ಇಬ್ಬರಿಗೆ ಗೃಹಲಕ್ಷ್ಮಿ ಹಣ ಜಮೆಯಾಗುತ್ತಿರುವ ಅಕ್ರಮಗಳೂ ಪತ್ತೆಯಾಗುತ್ತಿದ್ದು, ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಮಗ್ರ ಪರಿಶೀಲನೆ ನಡೆಸಲು ಸರ್ಕಾರ ತೀರ್ಮಾನಿಸಿದೆ.



