ಛತ್ತೀಸ್‌ಗಢ: ನಕ್ಸಲರು ಈ ಹಿಂದೆ ಹೂತಿಟ್ಟಿದ್ದ ಐಇಡಿ ಸ್ಫೋಟದ ತಪಾಸಣೆ ಮತ್ತು ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆ ವೇಳೆ ನಡೆದ ಭೀಕರ ಸ್ಫೋಟದಲ್ಲಿ ಮೂವರು ಡಿಆರ್‌ಜಿ ಯೋಧರು ಹುತಾತ್ಮರಾಗಿದ್ದಾರೆ ಹಾಗೂ ಮತ್ತೊಬ್ಬ ಯೋಧ ಗಂಭೀರವಾಗಿ ಗಾಯಗೊಂಡಿರುವ ಘಟನೆ ಛತ್ತೀಸ್‌ಗಢದ ಕಾಂಕೇರ್ ಜಿಲ್ಲೆಯಲ್ಲಿ ನಡೆದಿದೆ.
ಕಾಂಕೇರ್ ಮತ್ತು ನಾರಾಯಣಪುರ ಜಿಲ್ಲೆಯ ಗಡಿ ಭಾಗದ ಅರಣ್ಯ ಪ್ರದೇಶದಲ್ಲಿ, ಛೋಟೆಬೆತಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದ್ದು. ಈ ಹಿಂದೆ ನಕ್ಸಲರು ಅಳವಡಿಸಿದ್ದ ಸ್ಫೋಟಕಗಳನ್ನು ಪತ್ತೆಹಚ್ಚಿ ಅವುಗಳನ್ನ ನಿಷ್ಕ್ರಿಯಗೊಳಿಸುವ ಕಾರ್ಯಾಚರಣೆಯಲ್ಲಿ ಡಿಆರ್‌ಜಿ ತಂಡ ತೊಡಗಿತ್ತು. ಕಾರ್ಯಾಚರಣೆಯ ಸಂದರ್ಭದಲ್ಲಿ ಯೋಧರು ಐಇಡಿ ಒಂದನ್ನು ಪತ್ತೆಹಚ್ಚಿ ಅದನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸಿದರು. ಆ ವೇಳೆ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿದೆ.
ಈ ಭೀಕರ ಸ್ಫೋಟದಿಂದ ತೀವ್ರವಾಗಿ ಗಾಯಗೊಂಡ ಮೂವರು ಯೋಧರು ಸ್ಥಳದಲ್ಲೇ ಹುತಾತ್ಮರಾಗಿದ್ದಾರೆ. ಮತ್ತೊಬ್ಬ ಯೋಧರಾದ ಕಾನ್‌ಸ್ಟೆಬಲ್ ಪರಮಾನಂದ ಕೊಮ್ರಾ ಅವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಸುಖ್‌ರಾಮ್ ವಟ್ಟಿ (ಡಿಆರ್‌ಜಿ ಇನ್‌ಸ್ಪೆಕ್ಟರ್), ಕೃಷ್ಣ ಕೊಮ್ರಾ (ಕಾನ್‌ಸ್ಟೆಬಲ್) ಮತ್ತು ಸಂಜಯ್ ಗಢಪಾಲೆ (ಕಾನ್‌ಸ್ಟೆಬಲ್) ಎಂಬ ಮೂವರು ಯೋಧರು ಪ್ರಾಣ ಕಳೆದುಕೊಂಡಿದ್ದಾರೆ.
ಬಸ್ತಾರ್ ವಲಯದ ಐಜಿ ಸುಂದರ್‌ರಾಜ್ ಪಿ. ಅವರು ಈ ಘಟನೆಯನ್ನು “ದುರದೃಷ್ಟಕರ ಆಕಸ್ಮಿಕ ಅಪಘಾತ” ಎಂದು ಹೇಳಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಶರಣಾದ ನಕ್ಸಲರು ನೀಡಿದ ಮಾಹಿತಿ ಮತ್ತು ಗುಪ್ತಚರ ಇಲಾಖೆಯ ಸುಳಿವುಗಳ ಆಧಾರದ ಮೇಲೆ ನೂರಾರು ಐಇಡಿಗಳನ್ನು ಭದ್ರತಾ ಪಡೆಗಳು ಯಶಸ್ವಿಯಾಗಿ ಪತ್ತೆಹಚ್ಚಿ ನಿಷ್ಕ್ರಿಯಗೊಳಿಸಿವೆ ಎಂದು ಅವರು ತಿಳಿಸಿದ್ದಾರೆ.



