ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಆಡಳಿತ ಶೈಲಿ ಮತ್ತು ರಾಜಕೀಯ ನಡೆಗೆ ಕಟುವಾಗಿ ಟೀಕೆ ವ್ಯಕ್ತಪಡಿಸಿದ ಅವರು, ದೇಶದ ಪ್ರಾದೇಶಿಕ ಪಕ್ಷಗಳನ್ನು ದುರ್ಬಲಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದ್ದು, ಮೋದಿಯವರ ನಡೆ ‘ಭಸ್ಮಾಸುರ’ನಂತಿದೆ ಎಂದು ಆರೋಪಿಸಿದರು.
ಇಂಧನ ಬಳಕೆ ಕಡಿಮೆ ಮಾಡಿ ಮಿತವ್ಯಯ ಪಾಲಿಸಬೇಕು ಎಂಬ ಪ್ರಧಾನಿಯವರ ಸಲಹೆಗೆ ಪ್ರತಿಕ್ರಿಯಿಸಿದ ಹರಿಪ್ರಸಾದ್, ಇತರರಿಗೆ ಮಿತವ್ಯಯದ ಪಾಠ ಹೇಳುವ ಮೊದಲು, ಗಂಗಾ ನದಿಯಲ್ಲಿ ದೋಣಿ ವಿಹಾರ ಮಾಡುವಾಗ ಮತ್ತು ಚುನಾವಣಾ ರ‍್ಯಾಲಿಗಳನ್ನು ನಡೆಸುವ ವೇಳೆ ಆ ಮಿತವ್ಯಯ ಎಲ್ಲಿ ಹೋಗಿತ್ತು? ಎಂದು ಪ್ರಶ್ನಿಸಿದರು.
ಇನ್ನು ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂಚಿತವಾಗಿಯೇ ಎಚ್ಚರಿಕೆ ನೀಡಿದ್ದರೂ, ಕೇಂದ್ರ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಅದರ ಪರಿಣಾಮವಾಗಿ ದೇಶ ಇಂದು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ ಎಂದು ದೂರಿದರು.
ಹರಿಪ್ರಸಾದ್ ಅವರ ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದ್ದು, ಈ ವಿವಾದಾತ್ಮಕ ಹೇಳಿಕೆಯು ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷವಾದ ಬಿಜೆಪಿಯ ನಡುವೆ ತೀವ್ರ ರಾಜಕೀಯ ವಾಗ್ದಾಳಿಗೆ ಕಾರಣವಾಗಿದೆ.



