ಮಲೆನಾಡು ಹಾಗೂ ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮುಂಗಾರು ಬಿರುಸಾಗಿದ್ದು, ನಿರಂತರವಾಗಿ ಸುರಿಯುತ್ತಿರುವಮಳೆಯಿಂದಾಗಿ ಕರ್ನಾಟಕದ ಪ್ರಮುಖ ನದಿ ಮತ್ತು ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಾಗಿದೆ. ಶಿವಮೊಗ್ಗದ ಗಾಜನೂರು ಬಳಿಯ ತುಂಗಾ ಜಲಾಶಯವು ತನ್ನ ಗರಿಷ್ಠ ಮಟ್ಟ ತಲುಪಿ ಭರ್ತಿಯಾಗಿದ್ದು, 13 ಗೇಟ್‌ಗಳನ್ನು ತೆರೆದು 22 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರನ್ನು ನದಿಗೆ ಹರಿಸಲಾಗುತ್ತಿದೆ. ಇತ್ತ, ತುಂಗಭದ್ರಾ ಡ್ಯಾಂನಲ್ಲಿ ಸಹ ಒಳಹರಿವು ಆರಂಭವಾಗಿದ್ದು, ಇದರ ಜೊತೆಗೆ ಲಿಂಗನಮಕ್ಕಿ, ಹಿಪ್ಪರಗಿ ಹೀಗೆ ಬಹುತೇಕ ಎಲ್ಲಾ ಕಡೆಯಲ್ಲಿ ಒಳಹರಿವು ಅಧಿಕವಾಗುತ್ತಿದೆ.
ಶಿವಮೊಗ್ಗ/ಹೊಸಪೇಟೆ/ಬೆಳಗಾವಿ: ತುಂಗಾ ನದಿ ಕಣಿವೆಯ ಕಳಸ, ಶೃಂಗೇರಿ, ಕೊಪ್ಪ, ತೀರ್ಥಹಳ್ಳಿ ಭಾಗದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ನದಿ ಭೋರ್ಗರೆಯುತ್ತಿದ್ದು, ಗಾಜನೂರು ಬಳಿಯ ತುಂಗಾ ಜಲಾಶಯ ಭರ್ತಿಯಾಗಿದೆ.
ಜಲಾಶಯದಲ್ಲಿ 3.24 ಟಿಎಂಸಿ ನೀರು (ಗರಿಷ್ಠ ಮಟ್ಟ 588.24 ಮೀಟರ್) ಸಂಗ್ರಹಗೊಂಡಿದೆ. ಡ್ಯಾಂನ 22 ಗೇಟ್‌ಗಳ ಪೈಕಿ 13ರನ್ನು ತೆರೆದು 22,822 ಕ್ಯುಸೆಕ್ ನೀರು ನದಿಗೆ ಬಿಡಲಾಗುತ್ತಿದೆ.
ಘಟ್ಟ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಭದ್ರಾ ಮತ್ತು ಲಿಂಗನಮಕ್ಕಿ ಜಲಾಶಯಗಳಲ್ಲೂ ಒಳಹರಿವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಭದ್ರಾ ಜಲಾಶಯದಲ್ಲಿ ಶನಿವಾರ 2,108 ಕ್ಯುಸೆಕ್‌ನಷ್ಟಿದ್ದ ಒಳಹರಿವಿನ ಪ್ರಮಾಣ ಭಾನುವಾರ 7,919 ಕ್ಯುಸೆಕ್‌ಗೆ ಏರಿಕೆಯಾಗಿತ್ತು. ಲಿಂಗನಮಕ್ಕಿಯಲ್ಲಿ 7,950 ಕ್ಯುಸೆಕ್‌ರಷ್ಟಿದ್ದ ಒಳಹರಿವು 15,376 ಕ್ಯುಸೆಕ್‌ಗೆ ಹೆಚ್ಚಳವಾಗಿತ್ತು. ಲಿಂಗನಮಕ್ಕಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ 137.4 ಎಂ.ಎಂ ಮಳೆ ಸುರಿದಿದೆ. ಆಗುಂಬೆಯಲ್ಲಿ 186.2 ಮಿ.ಮೀ., ಹುಲಿಕಲ್‌ನಲ್ಲಿ 170 ಮಿ.ಮೀ. ಮಳೆಯಾಗಿದೆ.
ತುಂಗಭದ್ರಾ ಡ್ಯಾಂ ಒಳಹರಿವು ಆರಂಭ
ಇತ್ತ, ‘‘ಮಲೆನಾಡು ಪ್ರದೇಶದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ವ್ಯಾಪಕ ಮಳೆಯ ಪರಿಣಾಮ, ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು, ತುಂಗಭದ್ರಾ ಜಲಾಶಯಕ್ಕೂ ಒಳಹರಿವು ಆರಂಭವಾಗಿದೆ,’’ ಎಂದು ತುಂಗಭದ್ರಾ ಮಂಡಳಿಯ ಅಧಿಕಾರಿಗಳು ದೃಢಪಡಿಸಿದ್ದಾರೆ.
ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ 2 ಸಾವಿರ ಕ್ಯೂಸೆಕ್‌ಗೂ ಅಧಿಕ ಒಳಹರಿವು ಭಾನುವಾರ ಸಂಜೆ ಬಳಿಕ ಡ್ಯಾಂಗೆ ಹರಿದು ಬರಲಾರಂಭಿಸಿದೆ. ತಿಂಗಳ ಬಳಿಕ ನೀರು ಹರಿದು ಬರುತ್ತಿರುವುದರಿಂದ ಡೆಡ್ ಸ್ಟೋರೇಜ್ ಮಟ್ಟಕ್ಕೆ ನೀರಿನ ಪ್ರಮಾಣ ಏರಿಕೆಯಾಗಲಿದೆ. ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ರಾಜವಾಳ ಸಮೀಪವಿರುವ ಸಿಂಗಟಾಲೂರು ಬ್ಯಾರೇಜ್‌ನಲ್ಲಿ ಸುಮಾರು ಮೂರು ಸಾವಿರ ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಬ್ಯಾರೇಜ್‌ಗೆ ಬರುತ್ತಿರುವ ನೀರಿನ ಪ್ರಮಾಣಕ್ಕೆ ಅನುಗುಣವಾಗಿ, ಅಷ್ಟೇ ಪ್ರಮಾಣದ ನೀರನ್ನು ವಿದ್ಯುತ್ ಉತ್ಪಾದನಾ ಘಟಕದ ಪವರ್ ಹೌಸ್ ಗೇಟ್ ಮೂಲಕ ನದಿಗೆ ಹರಿಸಲಾಗುತ್ತಿದೆ. ತುಂಗಾ ಜಲಾಶಯದಿಂದ ಈಗಾಗಲೇ ಸುಮಾರು 6 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಟ್ಟಿದ್ದು, ಮಳೆಯ ತೀವ್ರತೆ ಮುಂದುವರಿದಿರುವ ಹಿನ್ನೆಲೆ, ಮುಂದಿನ ಎರಡು ದಿನಗಳಲ್ಲಿ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿ: ಸ್ಟೀಫನ್ ಜೇಮ್ಸ್.



