ಚಳ್ಳಕೆರೆ : ಮಾಜಿ ಸಚಿವ ಡಿ.ಸುಧಾಕರ್ ಅವರು ಶ್ವಾಸಕೋಶದ ತೀವ್ರ ಸೋಂಕಿನಿಂದಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಆದರೆ, ಅವರ ಮರಣದ ಬೆನ್ನಲ್ಲೇ ಅವರ ಚಳ್ಳಕೆರೆ ನಿವಾಸದ ಬಳಿ ತಾಮ್ರದ ಪತ್ರ, ನಿಂಬೆಹಣ್ಣು ಸೇರಿದಂತೆ ಮಾಟ-ಮಂತ್ರಕ್ಕೆ ಬಳಸುವ ನಿಗೂಢ ವಸ್ತುಗಳು ಪತ್ತೆಯಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಘಟನೆ ಸ್ಥಳೀಯವಾಗಿ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ವಾಮಾಚಾರ ನಡೆದಿರಬಹುದೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
ಮನೆ ಕೆಲಸಗಾರನೊಬ್ಬ ಈ ವಸ್ತುಗಳನ್ನು ಮೊದಲು ಗಮನಿಸಿದ್ದು, ಬಳಿಕ ಅದನ್ನು ಹೊರತೆಗೆದು ತೋರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಿರಿಯೂರು ಮತ್ತು ಚಳ್ಳಕೆರೆ ಭಾಗದಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದ್ದು, ಕೆಲವರು ಇದು ಉದ್ದೇಶಪೂರ್ವಕವಾಗಿ ಇಡಲಾದ ವಸ್ತುಗಳು ಎಂದು ಶಂಕೆ ವ್ಯಕ್ತಪಡಿಸುತ್ತಿದ್ದಾರೆ.
ಆದರೆ ವೈದ್ಯಕೀಯ ವರದಿಗಳ ಪ್ರಕಾರ, ಸುಧಾಕರ್ ಅವರು ಶ್ವಾಸಕೋಶದ ತೀವ್ರ ಸೋಂಕಿನಿಂದ ಬಳಲುತ್ತಿದ್ದು, ಬೆಂಗಳೂರಿನ KIMS ಆಸ್ಪತ್ರೆಯಲ್ಲಿ ಕಳೆದ ಎರಡು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೇ 10ರ ಮುಂಜಾನೆ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ತಿಳಿಸಿತ್ತು. ಈ ಪ್ರಕರಣದಲ್ಲಿ ವಾಮಾಚಾರದ ವಸ್ತುಗಳು ಮತ್ತು ಅವರ ಸಾವಿನ ನಡುವೆ ಯಾವುದೇ ಸಂಬಂಧವಿದೆ ಎಂಬುದಾಗಿ ಕುಟುಂಬಸ್ಥರು ಅಥವಾ ಪೊಲೀಸ್ ಇಲಾಖೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಈ ಕುರಿತು ಯಾವುದೇ ದೂರು ಸಹ ದಾಖಲಾಗಿಲ್ಲ.
ಸಚಿವ ಸುಧಾಕರ್ ಅವರ ಪಾರ್ಥಿವ ಶರೀರವನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮತ್ತು ಚಳ್ಳಕೆರೆಗೆ ತಂದು ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮೇ 11 ರಂದು ಜೈನ್ ಸಂಪ್ರದಾಯದಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಹಲವು ಗಣ್ಯರು ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಿ ಸಂತಾಪ ಸೂಚಿಸಿದ್ದರು. ಇದೀಗ ಎರಡು ದಿನಗಳ ಬಳಿಕ ಅವರ ಸಾವಿಗೆ ವಾಮಾಚಾರ ಕಾರಣವೇ ಎಂಬ ಶಂಕೆ ಎದ್ದಿದೆ.



