ಮೈಸೂರು: ಕೇಂದ್ರ ಸರಕಾರ ಪೆಟ್ರೋಲ್ ಡೀಸೆಲ್, ಅಡುಗೆ ಅನಿಲಗಳ ಬೆಲೆ ಏರಿಕೆ ವಿರೋಧಿಸಿ, ನೀಟ್ ಪರೀಕ್ಷೆಯ ಅಕ್ರಮದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ) ಮೈಸೂರು ಸ್ಥಳೀಯ ಸಮಿತಿವತಿಯಿಂದ ಗಾಂಧಿ ವೃತ್ತದಲ್ಲಿ ಬುಧವಾರ ನಡೆಸಲಾಯಿತು.
ಕೇಂದ್ರ ಸರಕಾರದ ಜನ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದ ಸಿಪಿಐ ಎಂ ಕಾರ್ಯಕರ್ತರು ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬೆಲೆ ಏರಿಕೆ ವಿರುದ್ಧ ಪ್ರಚಾರ ಮಾಡಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ಕಳೆದ 12 ವರ್ಷಗಳಿಂದ ರೈತ-ಕಾರ್ಮಿಕರಿಗೆ,ಬಡವರಿಗೆ, ಜನ ಸಾಮಾನ್ಯರಿಗೆ ಬೆಲೆ ಏರಿಕೆ ಬಿಸಿಮುಟ್ಟಿಸಿ ಜನರನ್ನು ಸುಲಿಗೆ ಮಾಡುತ್ತಿದೆ.ಪರೋಕ್ಷ ತೆರಿಗೆ ಹೆಚ್ಚಿಸಿ,ಪ್ರತ್ಯಕ್ಷ ತೆರಿಗೆಯನ್ನು ನಿರಂತರವಾಗಿ ಇಳಿಸುತ್ತಿದೆ. ಮೋದಿ ನಾವು ಅಧಿಕಾರಕ್ಕೆ ಬಂದರೆ ಒಳ್ಳೆಯ ದಿನಗಳನ್ನು ತರುತ್ತೇವೆಂದು ಹೇಳಿ, ಈಗ ಮುಂದೆ ಕೆಟ್ಟ ದಿನಗಳು ಬರುತ್ತಿವೆ ಎಂದು ಹೇಳುವ ಮೂಲಕ ಜನರನ್ನು ಮತ್ತಷ್ಟು ಕಷ್ಟಕ್ಕೆ ದೂಡುತ್ತಿದೆ. ಈ ಹಿಂದೆ ಅಡುಗೆ ಅನಿಲಗಳ ಬೆಲೆ ಏರಿಸಿತ್ತು. ಪಂಚ ರಾಜ್ಯಗಳ ಚುನಾವಣೆ ಮುಗಿಯುವವರೆಗೂ ಸುಮ್ಮನಿದ್ದು, ಚುನಾವಣೆ ಮುಗಿದ ನಂತರ ಒಂದೇ ವಾರದಲ್ಲಿ ಎರಡು ಬಾರಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಸುವ ಮೂಲಕ ಜನರನ್ನು ಲೂಟಿ ಹೊಡೆಯಲು ಮುಂದಾಗಿದೆ ಎಂದು ದೂರಿದರು.
ನೀಟ್ ಪರೀಕ್ಷೆಯನ್ನು ಸರಿಯಾಗಿ ನಡೆಸದೇ ಹಲವು ಮುಗ್ಧ ಅಮಾಯಕ ವಿದ್ಯಾರ್ಥಿಗಳನ್ನು ಆತ್ಮಹತ್ಯೆಗೆ ತಳ್ಳಿದ ಕೊಲೆಗಡುಕ ಸರ್ಕಾರ, ಈ ಅಕ್ರಮದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಜಿಲ್ಲಾ ಸಮಿತಿ ಸದಸ್ಯರಾದ ಎನ್.ವಿಜಯ್ಕುಮಾರ್, ಜಯರಾಂ, ಮೆಹಬೂಬ್, ಸ್ಥಳೀಯ ಸಮಿತಿ ಕಾರ್ಯದರ್ಶಿ ಎನ್.ಸುಬ್ರಹ್ಮಣ್ಯ, ರಾಜೇಂದ್ರ, ಬಸವಯ್ಯ, ಬಲರಾಂ, ಬಾಲಾಜಿರಾವ್, ಶ್ರೀಧರ್, ಶಶಿಕುಮಾರ್, ಲ.ಜಗನ್ನಾಥ್, ಪುಟ್ಟ ಮಲ್ಲಯ್ಯ, ಅಭಿ,ಕೃಷ್ಣಪ್ಪ,ಆರ್.ಸುಬ್ರಹ್ಮಣ್ಯ ಮುಂತಾದವರು ಇದ್ದರು.



