ಬೆಂಗಳೂರು : ‘ಕರುನಾಡ ಚಕ್ರವರ್ತಿ’, ‘ಹ್ಯಾಟ್ರಿಕ್ ಹೀರೋ’ ಡಾ. ಶಿವರಾಜ್‌ಕುಮಾರ್ ಅವರು ಇದೇ ಜುಲೈ 12ರಂದು ತಮ್ಮ 64ನೇ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಸಾವಿರಾರು ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸಜ್ಜಾಗುತ್ತಿರುವ ಬೆನ್ನಲ್ಲೇ, ಶಿವಣ್ಣ ಅಭಿಮಾನಿಗಳಲ್ಲಿ ಹೃದಯಸ್ಪರ್ಶಿ ಮನವಿಯೊಂದನ್ನು ಮಾಡಿದ್ದಾರೆ.
ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿರುವ ಶಿವರಾಜ್‌ಕುಮಾರ್, “ಸಿಗೋಣ ಜುಲೈ 12ಕ್ಕೆ… ಪ್ರೀತಿ, ಅಭಿಮಾನ ಮಾತ್ರ ತಗೊಂಡು ಬನ್ನಿ” ಎಂಬ ಭಾವನಾತ್ಮಕ ಕ್ಯಾಪ್ಷನ್ ಮೂಲಕ ಅಭಿಮಾನಿಗಳಿಗೆ ಮುಕ್ತ ಆಹ್ವಾನ ನೀಡಿದ್ದಾರೆ.
“ನಿಮ್ಮ ಪ್ರೀತಿಯೇ ನನಗೆ ದೊಡ್ಡ ಉಡುಗೊರೆ”
ವಿಡಿಯೊದಲ್ಲಿ ಅತ್ಯಂತ ಸರಳವಾಗಿ ಮಾತನಾಡಿರುವ ಶಿವಣ್ಣ, “ಎಲ್ಲರಿಗೂ ನಮಸ್ಕಾರ. ಜುಲೈ 12 ನನ್ನ ಹುಟ್ಟುಹಬ್ಬ. ನೀವು ಪ್ರತಿವರ್ಷದಂತೆ ಈ ಬಾರಿಯೂ ಬರ್ತೀರ ಅನ್ನೋದು ನನಗೆ ಗೊತ್ತಿದೆ. ಆದರೆ ಈ ಬಾರಿ ನನ್ನದೊಂದು ಸಣ್ಣ ಮನವಿ ಇದೆ. ಯಾವುದೇ ಉಡುಗೊರೆ ತರಬೇಡಿ. ವಿಶೇಷವಾಗಿ ಕೇಕ್, ಹಾರ, ಶಾಲು ಯಾವುದೂ ಬೇಡ. ನಿಮ್ಮೆಲ್ಲರ ಪರವಾಗಿ ನಾನೇ ಒಂದು ಕೇಕ್ ಕಟ್ ಮಾಡುತ್ತೇನೆ. ನಿಮ್ಮ ಪ್ರೀತಿ, ಶುಭಾಶಯಗಳೇ ನನಗೆ ದೊಡ್ಡ ಉಡುಗೊರೆ. ಎಲ್ಲರೂ ಬನ್ನಿ… ಭೇಟಿಯಾಗೋಣ… ಸಂತೋಷವಾಗಿ ಸಮಯ ಕಳೆಯೋಣ,” ಎಂದು ವಿನಂತಿಸಿಕೊಂಡಿದ್ದಾರೆ.
ನೆಟ್ಟಿಗರ ಮನಗೆದ್ದ ದೊಡ್ಮನೆಯ ಸರಳತೆ!
ಶಿವಣ್ಣನ ಈ ವಿಡಿಯೊ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಭಾವುಕರಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
"ಅಪ್ಪು ಒಮ್ಮೆ ಹೇಳಿದ್ದರು... 'ನನಗೂ ನಮ್ಮ ಅಣ್ಣನಿಗೂ ವಯಸ್ಸೇ ಆಗಲ್ಲ.' ಹ್ಯಾಪಿ ಬರ್ತ್‌ಡೇ ಶಿವಣ್ಣ" ಎಂದು ಅಭಿಮಾನಿಯೊಬ್ಬರು ನೆನೆದರೆ, ಮತ್ತೊಬ್ಬರು "ಹ್ಯಾಪಿ ಬರ್ತ್‌ಡೇ ದೇವ್ರು" ಎಂದು ಶುಭ ಹಾರೈಸಿದ್ದಾರೆ.
ಇನ್ನೊಬ್ಬ ನೆಟ್ಟಿಗರು ಕಮೆಂಟ್ ಮಾಡಿ, "ಸ್ಯಾಂಡಲ್‌ವುಡ್‌ನ ಹಲವು ನಟರು ಹುಟ್ಟುಹಬ್ಬದಂದು ಮನೆಯಲ್ಲಿ ಇರಲ್ಲ ಎಂದು ಹೇಳುತ್ತಾರೆ. ಆದರೆ ದೊಡ್ಮನೆಯ ಶಿವಣ್ಣ ಮಾತ್ರ 'ಬನ್ನಿ' ಎಂದು ಆಹ್ವಾನಿಸುತ್ತಾರೆ. ದೊಡ್ಮನೆಯವರು ಅನ್ನೋದು ಮನೆಗೆ ಅಲ್ಲ, ಮನಸ್ಸಿಗೆ!" ಎಂದು ಶಿವಣ್ಣನ ಗುಣವನ್ನು ಕೊಂಡಾಡಿದ್ದಾರೆ.
ಯಾವುದೇ ಆಡಂಬರವಿಲ್ಲದೆ, “ಪ್ರೀತಿ ಮತ್ತು ಅಭಿಮಾನ ಮಾತ್ರ ಸಾಕು” ಎಂದು ಹೇಳುವ ಮೂಲಕ ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ತಮ್ಮ ಸರಳತೆಯಿಂದ ಮತ್ತೊಮ್ಮೆ ಕನ್ನಡಿಗರ ಮನ ಗೆದ್ದಿದ್ದಾರೆ.



