Thursday, May 21, 2026
Google search engine

Homeರಾಜ್ಯರಾಜ್ಯದ ಎಲ್ಲಾ ವನ್ಯಜೀವಿ ಸಫಾರಿಗಳಲ್ಲಿ ತೆರೆದ ಜೀಪ್‌ಗಳಿಗೆ ನಿಷೇಧ

ರಾಜ್ಯದ ಎಲ್ಲಾ ವನ್ಯಜೀವಿ ಸಫಾರಿಗಳಲ್ಲಿ ತೆರೆದ ಜೀಪ್‌ಗಳಿಗೆ ನಿಷೇಧ

ಬೆಂಗಳೂರು : ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ನಡೆದ ದುರ್ಘಟನೆಯಲ್ಲಿ ಮಹಿಳಾ ಪ್ರವಾಸಿಗೆಯೊಬ್ಬರು ಸಾವನ್ನಪ್ಪಿದ ಘಟನೆ ಹಿನ್ನೆಲೆ ರಾಜ್ಯ ಅರಣ್ಯ ಇಲಾಖೆ ಮಹತ್ವದ ಸುರಕ್ಷತಾ ಕ್ರಮಗಳನ್ನು ಘೋಷಿಸಿದೆ. ಅಲ್ಲದೆ ರಾಜ್ಯದ ಎಲ್ಲಾ ವನ್ಯಜೀವಿ ಸಫಾರಿಗಳಲ್ಲಿ ಇನ್ನುಮುಂದೆ ತೆರೆದ ಜೀಪ್ ಹಾಗೂ ಕ್ಯಾಂಪರ್ ವಾಹನಗಳ ಬಳಕೆಗೆ ನಿಷೇಧ ಹೇರಲು ಸರ್ಕಾರ ತೀರ್ಮಾನಿಸಿದೆ.

ದುಬಾರೆ ಶಿಬಿರದಲ್ಲಿ ಆನೆಗಳ ನಡುವೆ ನಡೆದ ಕಾದಾಟದ ವೇಳೆ ಒಂದು ಆನೆ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಮಹಿಳಾ ಪ್ರವಾಸಿಗೆಯೊಬ್ಬರು ಅದರ ಕೆಳಗೆ ಸಿಲುಕಿ ಮೃತಪಟ್ಟಿದ್ದರು. ಈ ಘಟನೆ ವನ್ಯಜೀವಿ ಪ್ರವಾಸೋದ್ಯಮದ ಸುರಕ್ಷತೆ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಪ್ರವಾಸಿಗರ ಸುರಕ್ಷತೆಯೇ ಸರ್ಕಾರದ ಮೊದಲ ಆದ್ಯತೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದ ಐದು ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ, ನಾಗರಹೊಳೆ, ಕಾಳಿ, ಬಿಳಿಗಿರಿರಂಗನಬೆಟ್ಟ, ಭದ್ರಾ, ಮಲೆ ಮಹದೇಶ್ವರ ಬೆಟ್ಟ, ದಾಂಡೇಲಿ ಹಾಗೂ ಕೆ.ಗುಡಿ ಪ್ರದೇಶಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ಸುರಕ್ಷತಾ ನಿಯಮಗಳನ್ನು ಜಾರಿಗೆ ತರಲಾಗುತ್ತಿದ್ದು, ಇದುವರೆಗೆ ಬಳಸಲಾಗುತ್ತಿದ್ದ ತೆರೆದ ಕ್ಯಾಂಪರ್ ವಾಹನಗಳ ಬದಲಿಗೆ ಸಂಪೂರ್ಣ ಸುರಕ್ಷಿತ ಬಸ್ ಸಫಾರಿಗಳನ್ನು ಆರಂಭಿಸಲು ಸಚಿವರು ಸೂಚಿಸಿದ್ದಾರೆ.

ಹಾಲಿ ಬಳಕೆಯಲ್ಲಿರುವ ವಾಹನಗಳನ್ನು ಬಳಸಬೇಕಾದರೆ, ಅವುಗಳಿಗೆ ಕಬ್ಬಿಣದ ಜಾಲರಿ ಅಥವಾ ಒಡೆಯಲಾಗದ ಗಾಜಿನ ಕಿಟಕಿಗಳನ್ನು ಅಳವಡಿಸಿ ಸುರಕ್ಷತೆ ಹೆಚ್ಚಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದ್ದು, ದೇಶ-ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುವುದರಿಂದ ಸುರಕ್ಷತೆಯಲ್ಲಿ ಯಾವುದೇ ರಾಜಿ ಇರಬಾರದು ಎಂದು ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಜೊತೆಗೆ, ಎಲ್ಲಾ ಸಫಾರಿ ವಾಹನಗಳಲ್ಲಿ ಪ್ರಥಮ ಚಿಕಿತ್ಸೆ ಕಿಟ್ ಕಡ್ಡಾಯವಾಗಿರಬೇಕು ಹಾಗೂ ಸಫಾರಿ ಕೇಂದ್ರಗಳ ಬಳಿ ಆಂಬುಲೆನ್ಸ್ ವ್ಯವಸ್ಥೆ ಇರಬೇಕು ಎಂದೂ ತಿಳಿಸಿದರಲ್ಲದೆ, ಸಫಾರಿ ವೇಳೆ ಪ್ರವಾಸಿಗರು ವಾಹನದಿಂದ ಇಳಿಯುವುದು ಅಥವಾ ವನ್ಯಜೀವಿಗಳ ಹತ್ತಿರ ಹೋಗುವುದು ಸಂಪೂರ್ಣ ನಿಷೇಧಿಸಲಾಗಿದ್ದು, ನಿಯಮ ಉಲ್ಲಂಘನೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ಇದೇ ವೇಳೆ, ದುಬಾರೆ ಘಟನೆಯಲ್ಲಿ ಆಕ್ರಮಣಕಾರಿ ವರ್ತನೆ ತೋರಿದ ‘ಕಂಜನ್’ ಆನೆಯನ್ನು ಮೈಸೂರು ದಸರಾ ಜಂಬೂಸವಾರಿಯಿಂದ ಕೈಬಿಡಲು ಸರ್ಕಾರ ತೀರ್ಮಾನಿಸಿದ್ದು, ದಸರಾ ಸಂದರ್ಭದಲ್ಲಿ ಜನರು ಆನೆಗಳಿಗೆ ಅತಿಯಾಗಿ ಹತ್ತಿರ ಹೋಗದಂತೆ ಹೊಸ ಸುರಕ್ಷತಾ ಮಾರ್ಗಸೂಚಿಗಳನ್ನು ರೂಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.

RELATED ARTICLES
- Advertisment -
Google search engine

Most Popular