ಮೈಸೂರು : ರಾಜ್ಯ ಸರ್ಕಾರ ಬಜೆಟ್ನಲ್ಲಿ ಘೋಷಿಸಿರುವಂತೆ ವಸತಿ ರಹಿತರ ಸಮಗ್ರ ಗಣತಿ ನಡೆಸಿ, ಅರ್ಹ ಕುಟುಂಬಗಳಿಗೆ ವಸತಿ ಹಾಗೂ ನಿವೇಶನ ಒದಗಿಸಬೇಕು ಎಂದು ಒತ್ತಾಯಿಸಿ ವಸತಿ ಮತ್ತು ನಿವೇಶನ ರಹಿತರ ಹೋರಾಟ ವೇದಿಕೆ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದ ಹೋರಾಟಗಾರರು, ಗ್ರಾಮ ಪಂಚಾಯಿತಿ, ನಗರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಸತಿ ಮತ್ತು ನಿವೇಶನಕ್ಕಾಗಿ ಅರ್ಜಿಗಳನ್ನು ಸ್ವೀಕರಿಸಿ, ಅವುಗಳನ್ನು ರಾಜೀವ್ ಗಾಂಧಿ ವಸತಿ ನಿಗಮದ ವೆಬ್ಸೈಟ್ನಲ್ಲಿ ದಾಖಲಿಸಬೇಕು ಎಂದು ಆಗ್ರಹಿಸಿದರು.
ಇನ್ನೂ ರಾಜೀವ್ ಗಾಂಧಿ ವಸತಿ ನಿಗಮದ ಮಾಹಿತಿಯ ಪ್ರಕಾರ, ರಾಜ್ಯದಲ್ಲಿ 19,19,872 ಕುಟುಂಬಗಳು ವಸತಿ ರಹಿತರಾಗಿದ್ದು, 7,15,948 ಕುಟುಂಬಗಳಿಗೆ ನಿವೇಶನ ಇಲ್ಲ. ಒಟ್ಟು 26,35,820 ಕುಟುಂಬಗಳು ವಸತಿ ಸಮಸ್ಯೆ ಎದುರಿಸುತ್ತಿದ್ದು, ಇನ್ನೂ ಅರ್ಜಿ ಸಲ್ಲಿಸದ ಕುಟುಂಬಗಳನ್ನು ಸೇರಿಸಿದರೆ ರಾಜ್ಯದಲ್ಲಿ 50 ಲಕ್ಷಕ್ಕೂ ಹೆಚ್ಚು ಕುಟುಂಬಗಳು ವಸತಿ ಸೌಲಭ್ಯದಿಂದ ವಂಚಿತವಾಗಿವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಇಷ್ಟಲ್ಲದೆ ಮೈಸೂರು ಜಿಲ್ಲೆಯಲ್ಲಿ ವಸತಿಗಾಗಿ 77,549 ಹಾಗೂ ನಿವೇಶನಕ್ಕಾಗಿ 41,459 ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿ ಸಲ್ಲಿಸದ ಕುಟುಂಬಗಳನ್ನು ಪರಿಗಣಿಸಿದರೆ ಜಿಲ್ಲೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಕುಟುಂಬಗಳು ವಸತಿ ಹೀನ ಸ್ಥಿತಿಯಲ್ಲಿವೆ ಎಂದು ಹೇಳಿದರು. ಅರ್ಜಿಗಳನ್ನು ಸಮರ್ಪಕವಾಗಿ ಸ್ವೀಕರಿಸಿ ಪ್ರಕ್ರಿಯೆಗೊಳಿಸದ ಕಾರಣ ಕೇಂದ್ರ ಸರ್ಕಾರ ವಸತಿಗಾಗಿ ಮೀಸಲಿಟ್ಟಿರುವ ಅನುದಾನ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಇದು ಬಡವರ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪ್ರತಿಭಟನೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್, ಹೋರಾಟ ವೇದಿಕೆ ಅಧ್ಯಕ್ಷ ಎಚ್.ಬಿ.ರಾಮಕೃಷ್ಣ, ಕಾರ್ಯಾಧ್ಯಕ್ಷ ಎನ್.ಕೆ.ದೇವದಾಸ್, ಪ್ರಧಾನ ಕಾರ್ಯದರ್ಶಿ ಕೆ.ಜಿ.ಸೋಮಶೇಖರ್, ಮುಖಂಡರಾದ ಮುಜಾಹಿದ್ ಪಾಷ, ಸಾದಿಖ್ ಅಹಮ್ಮದ್, ನಜೀರ್, ಇರ್ಫಾನ್ ಸೇರಿದಂತೆ ಹಲವರು ಭಾಗವಹಿಸಿದ್ದರು.



