ಬೆಂಗಳೂರು : ತನ್ನ ತವರು ಮೈದಾನವಾದ ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 6 ವಿಕೆಟ್ ಗಳ ಸೋಲನ್ನು ಅನುಭವಿಸಿದೆ. ಚಿನ್ನಸ್ವಾಮಿ ಮೈದಾನದಲ್ಲಿ ತನ್ನ 100ನೇ ಪಂದ್ಯವನ್ನು ಆಡುತ್ತಿದ್ದ ಆರ್ ಸಿಬಿಗೆ ಈ ಪಂದ್ಯವನ್ನು ಗೆದ್ದು ಐತಿಹಾಸಿಕವಾಗಿಸುವ ಅವಕಾಶವಿತ್ತು, ಆದರೆ ತಂಡವು ಇದರಲ್ಲಿ ವಿಫಲವಾಯಿತು.
ಸೋಲಿನ ನಂತರ ಮಾತನಾಡಿದ ಆರ್ ಸಿಬಿ ನಾಯಕ ರಜತ್ ಪಾಟಿದಾರ್, ತಂಡದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಂದ್ಯದ ಸೋಲಿನ ಬಗ್ಗೆ ಮಾತನಾಡಿದ ಪಾಟಿದಾರ್, “ನಮ್ಮ ತಂಡ ಇನ್ನೂ 15-20 ರನ್ ಹೆಚ್ಚು ಗಳಿಸಬೇಕಿತ್ತು. ಚಿನ್ನಸ್ವಾಮಿ ಮೈದಾನದಲ್ಲಿ 175 ರನ್ ಗಳನ್ನು ರಕ್ಷಿಸಿಕೊಳ್ಳುವುದು ಕಷ್ಟಕರ. ಇಲ್ಲಿ ಈ ಹಿಂದೆ ಸನ್ ರೈಸರ್ಸ್ ಹೈದರಾಬಾದ್ 287 ರನ್‌ಗಳನ್ನೇ ದಾಖಲಿಸಿದೆ. ಪಂದ್ಯ ಗೆಲ್ಲಲು ನಾವು ಕನಿಷ್ಠ 190-195 ರನ್ ಗಳಿಸಬೇಕಿತ್ತು” ಎಂದು ಅಭಿಪ್ರಾಯಪಟ್ಟರು.
ಬ್ಯಾಟಿಂಗ್ ವೈಫಲ್ಯವೇ ಮುಳುವಾಯಿತು!
ಸೋಲಿಗೆ ಬ್ಯಾಟಿಂಗ್ ಕಾರಣ ಎಂದು ಹೇಳಿದ ಪಾಟಿದಾರ್ ಅವರು ವಿಶ್ಲೇಷಣೆ ನೀಡಿದ್ದು ಹೀಗೆ :
ಉತ್ತಮ ಆರಂಭ : ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಜೋಡಿ 52 ರನ್‌ಗಳ ಸ್ಫೋಟಕ ಆರಂಭ ನೀಡಿದ್ದರು.
ವಿಕೆಟ್ ಪತನ : ಆದರೆ 12ನೇ ಓವರ್ ನಂತರ ತಂಡವು ಸತತವಾಗಿ ವಿಕೆಟ್ ಕಳೆದುಕೊಂಡಿತು. ಇದರಿಂದ ರನ್ ವೇಗ ಕುಸಿದು ತಂಡ ಹಿನ್ನಡೆ ಅನುಭವಿಸಿತು.
ಮುಂದಿನ ಪಂದ್ಯ: “ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಮುಂದಿನ ಪಂದ್ಯಗಳಲ್ಲಿ ಬಲಿಷ್ಠವಾಗಿ ಮರಳುತ್ತೇವೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕೊನೆಯ ಓವರ್ ನಲ್ಲಿ ಮಗ್ಗಲು ಬದಲಿಸಿದ ಪಂದ್ಯ
ಡೆಲ್ಲಿ ತಂಡವು ಅಷ್ಟು ಸುಲಭವಾಗಿ ಗೆಲುವನ್ನು ಪಡೆಯಲಿಲ್ಲ. ಕೊನೆಯ 12 ಎಸೆತಗಳಲ್ಲಿ ಡೆಲ್ಲಿಗೆ 24 ರನ್ ಬೇಕಿತ್ತು. 19ನೇ ಓವರ್ ನಲ್ಲಿ ರಸಿಖ್ ದಾರ್ ಸಲಾಮ್ ಕೇವಲ 10 ರನ್ ನೀಡಿ ಆರ್ ಸಿಬಿಗೆ ಆಸೆ ಚಿಗುರಿಸಿದ್ದರು. ಆದರೆ, ಅಂತಿಮ ಓವರ್ ನಲ್ಲಿ ರೊಮಾರಿಯೋ ಶೆಫರ್ಡ್ ಎಸೆದ ಎಸೆತಗಳಲ್ಲಿ ಡೇವಿಡ್ ಮಿಲ್ಲರ್ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸುವ ಮೂಲಕ ಡೆಲ್ಲಿಗೆ ಜಯ ತಂದುಕೊಟ್ಟರು.
ಅಂಕಪಟ್ಟಿ ಸ್ಥಿತಿಗತಿ
ಸೋಲಿನ ಹೊರತಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಾಯಿಂಟ್ಸ್ ಟೇಬಲ್‌ನಲ್ಲಿ 2ನೇ ಸ್ಥಾನವನ್ನು ಕಾಯ್ದುಕೊಂಡಿದೆ. ಇನ್ನು ಈ ಗೆಲುವಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು 4ನೇ ಸ್ಥಾನಕ್ಕೆ ಏರಿದೆ.



