ನವದೆಹಲಿ : ಐಪಿಎಲ್ 2026ರ 29ನೇ ಪಂದ್ಯದಲ್ಲಿ ಭಾನುವಾರ ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 54 ರನ್‌ಗಳ ಸೋಲನ್ನು ಅನುಭವಿಸಿತು. ಈ ಸೋಲಿನ ನಂತರ ಮಾತನಾಡಿದ ಎಲ್‌ಎಸ್‌ಜಿ ನಾಯಕ ರಿಷಭ್ ಪಂತ್, ಸೋಲಿಗೆ ಯಾವುದೇ ಒಂದು ನಿರ್ದಿಷ್ಟ ಕಾರಣವನ್ನು ನೀಡುವುದು ಕಷ್ಟ ಎಂದು ಹೇಳಿದರು. ಆದಾಗ್ಯೂ, ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಅವರು ಗೆಲುವಿನ ಶ್ರೇಯವನ್ನು ನೀಡಿದರು.
ಈ ಸೀಸನ್ ನಲ್ಲಿ ಎದುರಾದ ನಾಲ್ಕನೇ ಸೋಲಿನ ನಂತರ ಪಂತ್ ಪ್ರತಿಕ್ರಿಯಿಸಿ ಸೋಲಿಗೆ ಒಂದೇ ಕಾರಣ ಹೇಳುವುದು ಕಷ್ಟ. ನಮ್ಮ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ, ಆದರೆ ಕೆಲವು ವಿಷಯಗಳ ಬಗ್ಗೆ ನಾವು ಗಮನಹರಿಸಬೇಕಿದೆ. ತಂಡದಲ್ಲಿ ಕೆಲವು ಧನಾತ್ಮಕ ಅಂಶಗಳೂ ಇವೆ, ಅವುಗಳ ಮೇಲೆ ನಾವು ಕೆಲಸ ಮಾಡಬಹುದು. ನಾವು ಚರ್ಚಿಸಿದಂತೆ ಬ್ಯಾಟಿಂಗ್‌ನಲ್ಲಿ ಕೆಲವು ಉತ್ತಮ ಕ್ಷಣಗಳು ಕಂಡುಬಂದವು. ನಾವು ಖಂಡಿತವಾಗಿಯೂ ಧನಾತ್ಮಕ ಅಂಶಗಳೊಂದಿಗೆ ಮುಂದೆ ಸಾಗಲು ಬಯಸುತ್ತೇವೆ ಮತ್ತು ಒಂದು ತಂಡವಾಗಿ ಪ್ರತಿ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ ಎಂದರು.
ಆಯುಷ್ ಬದೋನಿ ಆರಂಭಿಕ ಆಟಗಾರನಾಗಿ ಬಂದಿದ್ದೇಕೆ?
ಬ್ಯಾಟಿಂಗ್‌ನಲ್ಲಿ ಆಯುಷ್ ಬದೋನಿ ಅವರನ್ನು ಆರಂಭಿಕ ಆಟಗಾರನಾಗಿ ಕಣಕ್ಕಿಳಿಸಿದ ನಿರ್ಧಾರದ ಬಗ್ಗೆ ಮಾತನಾಡಿದ ಪಂತ್, “ಅವರು ಮೈದಾನಕ್ಕೆ ಹೋಗಿ ಯಾವುದೇ ಒತ್ತಡವಿಲ್ಲದೆ ಮುಕ್ತವಾಗಿ ಆಡಲಿ ಎಂಬುದು ನಮ್ಮ ಆಲೋಚನೆಯಾಗಿತ್ತು. ಈ ನಿರ್ಧಾರವನ್ನು ಇಂದೇ ತೆಗೆದುಕೊಂಡಿದ್ದಲ್ಲ, ಅವರು ಓಪನಿಂಗ್ ಮಾಡುತ್ತಾರೆ ಎಂಬುದು ಮೊದಲೇ ನಿರ್ಧಾರವಾಗಿತ್ತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಸಿಗಲಿ ಮತ್ತು ಮಧ್ಯಮ ಕ್ರಮಾಂಕದವರು ಕೂಡ ಕೊಡುಗೆ ನೀಡಲಿ ಎಂಬುದು ನಮ್ಮ ಉದ್ದೇಶವಾಗಿತ್ತು. ನಮಗೆ ಈ ತಂಡದ ಮೇಲೆ ಸಂಪೂರ್ಣ ನಂಬಿಕೆಯಿದೆ. ಆದರೆ ಎದುರಾಳಿ ತಂಡವು (ಪಂಜಾಬ್ ಕಿಂಗ್ಸ್) ಅತ್ಯುತ್ತಮವಾಗಿ ಆಡುತ್ತಿರುವಾಗ, ಅವರ ಅದ್ಭುತ ಕ್ರಿಕೆಟ್ ಪ್ರದರ್ಶನಕ್ಕೆ ನಾವು ಶ್ರೇಯ ನೀಡಲೇಬೇಕು,” ಎಂದರು.
ಪಂದ್ಯದ ಮುಖ್ಯಾಂಶಗಳು ಹೀಗಿದೆ :
ಪಂಜಾಬ್ ಕಿಂಗ್ಸ್ ಬ್ಯಾಟಿಂಗ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್, 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 254 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಪ್ರಿಯಾಂಶ್ ಆರ್ಯ: 37 ಎಸೆತಗಳಲ್ಲಿ 93 ರನ್ (4 ಬೌಂಡರಿ, 9 ಸಿಕ್ಸರ್), ಕೂಪರ್ ಕೊನೊಲಿ: 46 ಎಸೆತಗಳಲ್ಲಿ 87 ರನ್, ಮಾರ್ಕಸ್ ಸ್ಟೊಯಿನಿಸ್: 16 ಎಸೆತಗಳಲ್ಲಿ 29 ರನ್.
ಎಲ್ ಎಸ್ ಜಿ ಬೌಲಿಂಗ್ : ಪ್ರಿನ್ಸ್ ಯಾದವ್ 2 ವಿಕೆಟ್ (25 ರನ್), ಮೊಹಮ್ಮದ್ ಶಮಿ ಮತ್ತು ಮೊಹ್ಸಿನ್ ತಲಾ 1 ವಿಕೆಟ್ ಪಡೆದರು.
ಲಕ್ನೋ ಸೂಪರ್ ಜೈಂಟ್ಸ್ ಚೇಸಿಂಗ್:
255 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಲಕ್ನೋ ಸೂಪರ್ ಜೈಂಟ್ಸ್ ತಂಡ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 200 ರನ್ ಗಳಿಸಲಷ್ಟೇ ಶಕ್ತವಾಯಿತು.
ರಿಷಭ್ ಪಂತ್: 23 ಎಸೆತಗಳಲ್ಲಿ 43 ರನ್, ಏಡನ್ ಮಾರ್ಕ್ರಾಮ್: 22 ಎಸೆತಗಳಲ್ಲಿ 42 ರನ್, ಮಿಚೆಲ್ ಮಾರ್ಷ್: 28 ಎಸೆತಗಳಲ್ಲಿ 40 ರನ್.
ಪಂಜಾಬ್ ಬೌಲಿಂಗ್ : ಮಾರ್ಕೊ ಜಾನ್ಸೆನ್ 2 ವಿಕೆಟ್ (37 ರನ್), ಅರ್ಶ್‌ದೀಪ್ ಸಿಂಗ್, ವಿಜಯಕುಮಾರ್ ವೈಶಾಕ್ ಮತ್ತು ಯುಜ್ವೇಂದ್ರ ಚಹಾಲ್ ತಲಾ 1 ವಿಕೆಟ್ ಪಡೆದರು.



